ರಾಯಚೂರು: ಎಲ್ಲಾ ರಂಗದಲ್ಲೂ ಸರ್ಕಾರ ವಿಫಲವಾಗಿದ್ದು, ಹತಾಶವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರಿದ್ದಾರೆ.
ಮಸ್ಕಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ರೈತರು, ವರ್ತಕರು, ಕಾರ್ಮಿಕರು ಸೇರಿ ಯಾವುದೇ ವರ್ಗದ ಜನರಿಗೆ ನ್ಯಾಯ ದೊರೆಯುತ್ತಿಲ್ಲ. ರೈತರು ನಿರಂತರ ಹೋರಾಟ ನಡೆಸುತ್ತಿದ್ದರೂ ಅವರಿಗೆ ಯಾವುದೇ ಭರವಸೆ ಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕೊನೆಗೆ ನಾವು ಭರವಸೆ ನೀಡಿದ ಮೇಲೆ ರೈತರು ಸಮಾಧಾನವಾಗಿದ್ದಾರೆ. 5ಎ ಕಾಲುವೆ ವಿಚಾರದಲ್ಲಿ ರೈತರ ಜೊತೆಯಲ್ಲಿ ನಾವು ಇರುತ್ತೇವೆ ಎಂದರು.
ಉಪಚುನಾವಣೆ ಕಾನೂನುಬದ್ಧವಾಗಿ ನಡೆಯುತ್ತಿದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಜನರಿಗೆ ಹಂಚಲು ಎರಡು ಚೀಲದಲ್ಲಿ ಹಣ ಸಾಗಿಸುತ್ತಿದ್ದಾಗ ನಮ್ಮ ಕಾರ್ಯಕರ್ತರು ಹಿಡಿದಿದ್ದಾರೆ. ಬೈಕ್ನಲ್ಲಿ ಒಂದು ಚೀಲದಲ್ಲಿ ಹಣ ಕಳುಹಿಸಿ, ಇನ್ನೊಂದು ಚೀಲವನ್ನು ಚುನಾವಣಾಧಿಕಾರಿಗೆ ನೀಡಿದ್ದಾರೆ. ಮಟ್ಟೂರು ಗ್ರಾಮದಲ್ಲಿ ಪಿಎಸ್ಐ ಡಾಕೇಶ್ ಮುದಗಲ್ ಈ ಕೆಲಸ ಮಾಡಿದ್ದು, ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದನ್ನು ಡಿಲಿಟ್ ಮಾಡಿಸಿದ್ದಾರೆ. ಪಿಎಸ್ಐಅನ್ನು ಅಮಾನತು ಮಾಡಿ ಪ್ರಕರಣ ದಾಖಲಿಸಬೇಕು. ಸುಮಾರು 50 ಲಕ್ಷ ರೂ. ಹಣ ಬೇರೆಡೆಗೆ ಸಾಗಿಸಿದ್ದಾರೆ. ಎಸ್ಪಿಗೂ ಇದನ್ನು ಹೇಳುತ್ತೇವೆ, ಹೋರಾಟ ಮಾಡುತ್ತೇವೆ. ನ್ಯಾಯಬದ್ಧ ಚುನಾವಣೆ ನಡೆಸಲು ಚುನಾವಣಾ ಆಯೋಗ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.