ರಾಯಚೂರು: ಸರ್ಕಾರ ಒಡೆತನದಲ್ಲಿನ ಕೆರೆಗಳನ್ನು ಸಂಬಂಧಿಸಿದ ಇಲಾಖೆ ಮಲಿನವಾಗದಂತೆ ನಿರ್ವಹಣೆ ಮಾಡಬೇಕು. ಆದರೆ ರಾಯಚೂರು ನಗರದ ಪ್ರಮುಖ ಕೆರೆಗೆ ಚರಂಡಿ ನೀರು ಹರಿಯುತ್ತಿದ್ದು, ದುರ್ನಾತ ಬೀರುತ್ತಿದೆ. ಹೀಗಾಗಿ, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಕೆರೆಯನ್ನು ಸಮರ್ಪಕವಾಗಿ ಅಭಿವೃದ್ಧಿಗೊಳಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಮಾವಿನ ಕೆರೆಗೆ ಚರಂಡಿ ನೀರು ಹರಿಯುತ್ತಿದ್ದರೂ ಅಧಿಕಾರಿ ವರ್ಗ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಪರಿಣಾಮ ಕೆರೆ ದಿನದಿಂದ ದಿನಕ್ಕೆ ಮಲಿನದ ಪ್ರಮಾಣದ ಹೆಚ್ಚಾಗುತ್ತಿದೆ. ಕೆರೆಯ ಪಕ್ಕದಲ್ಲೇ ಉದ್ಯಾನ ಇರುವ ಕಾರಣ ಸಾರ್ವಜನಿಕರು ವಾಯುವಿಹಾರಕ್ಕೆ ಬರುತ್ತಿದ್ದರು. ಈಗ ಕೆರೆ ಗಬ್ಬು ನಾರುತ್ತಿದ್ದು, ಅತ್ತ ಯಾರೊಬ್ಬರೂ ಸುಳಿಯುತ್ತಿಲ್ಲ.
ರಾಜಕಾಲುವೆ ಮೂಲಕ ಚರಂಡಿ ನೀರನ್ನು ಹರಿಸುವುದರ ಜೊತೆಗೆ ಕಸದ ರಾಶಿ, ಸತ್ತ ನಾಯಿ, ಹಂದಿ, ಜಾನುವಾರುಗಳನ್ನು ಎಸೆಯಲಾಗುತ್ತಿದೆ. ಹೀಗಾಗಿ, ನೀರು ಮತ್ತಷ್ಟು ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಸುತ್ತಮುತ್ತಲಿನ ಬಡಾವಣೆ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪಪರಿಣಾಮ ಹರಡುತ್ತಿದೆ. ಕೆರೆಯ ನೀರು ಸಂಪೂರ್ಣ ವಿಷವಾಗಿದ್ದು, ಹುಳುಗಳು ಸಹ ಕಂಡು ಬರುತ್ತಿವೆ. ಅಲ್ಲದೇ ಕೆರೆ ಸುತ್ತಮುತ್ತ ಪ್ರದೇಶ ಒತ್ತುವರಿಯಾಗಿರುವ ಆರೋಪವಿದೆ.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಯಾಪಚೆಟ್ಟು ಗೋಪಾಲರೆಡ್ಡಿ ಇದಲ್ಲದೇ ನಗರದ ಹೊರವಲಯದ ನವೋದಯ ಬಳಿಯ ಗೊಲ್ಲಕುಂಟ ಕೆರೆ ಹಾಗೂ ಗದ್ವಾಲ ರಸ್ತೆಯಲ್ಲಿ ಯಲ್ಲಮ್ಮ ದೇವಿ ಕೆರೆಗಳಿವೆ. ಹೊಸದಾಗಿ ಆಯ್ಕೆಯಾದ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ, ಆಡಳಿತ ಸದಸ್ಯರು ಈ ಎರಡು ಕೆರೆಗಳ ಅಭಿವೃದ್ಧಿಗೆ ನೀಲನಕ್ಷೆ ಸಿದ್ದಪಡಿಸಿ, ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್) ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸರ್ಕಾರದಿಂದ ಅನುಮೋದನೆ ಬಂದ ಅನುಮೋದನ ಬಳಿಕ ಟೆಂಡರ್ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ ಅಧ್ಯಕ್ಷರು.
ನಗರದ ಹೊರವಲಯದ ಕೆಲ ಕೈಗಾರಿಕೆಗಳ ರಾಸಾಯನಿಕ ಕೆರೆಗಳಿಗೆ ಸೇರುತ್ತಿದೆ. ಈಚೆಗೆ ಬೈಪಾಸ್ ರಸ್ತೆಯಲ್ಲಿ ಮನ್ಸಾಲಪುರ ಕೆರೆಗೆ ಕೆಮಿಕಲ್ ಸುರಿಯುತ್ತಿದ್ದ ಲಾರಿಯೊಂದರ ಚಾಲಕನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಜಲಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳುವಂತಹ ಅವಕಾಶಗಳಿದ್ದರೂ ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನುವುದು ಸಾರ್ವಜನಿಕರ ಮಾತಾಗಿದೆ. ಕ್ರಮ ಕೈಗೊಳ್ಳಬೇಕಾದ ಪರಿಸರ ಇಲಾಖೆ ಮೌನವಹಿಸಿದೆ.