ರಾಯಚೂರು: ತಾಲೂಕಿನ ಶಕ್ತಿನಗರದ ವೈಟಿಪಿಎಸ್ ಗುತ್ತಿಗೆದಾರ ಹರ್ಷನ್ ಮನೆಗೆ ನುಗ್ಗಿ ಹಣ ನೀಡುವಂತೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಎಸ್ಪಿ ಡಾ. ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
ಹಣ ನೀಡುವಂತೆ ಗುತ್ತಿಗೆದಾರನಿಗೆ ಬೆದರಿಕೆ ಪ್ರಕರಣ: ಪ್ರಮುಖ ಆರೋಪಿಗಳ ಬಂಧನ - Case of threat to contractor
ಗುತ್ತಿಗೆದಾರನ ಮನೆಗೆ ನುಗ್ಗಿ ಹಣ ನೀಡುವಂತೆ ಬೆದರಿಕೆ ಹಾಕಿದ ಖದೀಮರ ಗುಂಪನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ.
ನಗರದ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಮೇ 7ರಂದು ಶಕ್ತಿನಗರದ ರಾಘವೇಂದ್ರ ಕಾಲೋನಿಯಲ್ಲಿ ಕೇರಳ ಮೂಲದ ವೈಟಿಪಿಎಸ್ ಗುತ್ತಿಗೆದಾರ ಹರ್ಷನ್ ಮನೆಗೆ ನುಗ್ಗಿದ ಸುಮಾರು 30 ಜನರ ಡಕಾಯಿತರ ತಂಡ, 20 ಲಕ್ಷ ನೀಡುವಂತೆ ಬೆದರಿಕೆ ಹಾಕಿತ್ತು. ಇದಾದ ಬಳಿಕ ಮತ್ತೆ ಮೇ 8ರಂದು ಹಣದ ಬೇಡಿಕೆ ಇಟ್ಟಿದ್ದರು. ಅಷ್ಟೊಂದು ಹಣವಿಲ್ಲವೆಂದ ಬಳಿಕ 5 ಲಕ್ಷ ರೂಪಾಯಿಯನ್ನ ಬ್ಯಾಂಕ್ ಖಾತೆಯ ಮೂಲಕ ವರ್ಗಾಯಿಸಿಕೊಂಡಿದ್ದರು. ಘಟನೆ ಬಳಿಕ ಶಕ್ತಿನಗರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು.
ದೂರಿನ ಹಿನ್ನೆಲೆ ಡಕಾಯಿತರನ್ನ ಸೆರೆ ಹಿಡಿಯಲು ವಿಶೇಷ ತಂಡ ರಚನೆ ಮಾಡಲಾಗಿತ್ತು. ಕೆಲ ದಿನಗಳ ಹಿಂದೆ 12 ಜನ ಡಕಾಯಿತರನ್ನ ಬಂಧಿಸಲಾಗಿತ್ತು. ಆದರೆ ಪ್ರಮುಖ ಆರೋಪಿಗಳು ಸೆರೆ ಸಿಕ್ಕಿರಲಿಲ್ಲ. ತನಿಖೆ ಮುಂದುವರೆಸಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ರೌಡಿಶೀಟರ್ ಯದ್ಲಾಪುರ ಗ್ರಾಮದ ಮಹ್ಮದ್ ಗೌಸ್ ಅಲಿಯಾಸ್ ಗೌಸ್, ವೆಂಕಟೇಶ್, ಜಾವೀದ್ ಹುಸೇನ್ ಬಂಧಿತರು. ಕೃತ್ಯಕ್ಕೆ ಬಳಸಿದ್ದ ಡ್ರ್ಯಾಗನ್, ಬಿದಿರಿನ ಬೆತ್ತದ ಮಾರಕಾಸ್ತ್ರಗಳು, 2 ಕಾರು, ಮೋಟಾರ್ ಸೈಕಲ್, ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.