ರಾಯಚೂರು: ಸಂಘ ಪರಿವಾರದವರು ಹುಟ್ಟಿದಾಗಿನಿಂದ ಸಮಾಜ ಒಡೆಯುವುದರಲ್ಲಿ ನಿರತರಾಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಆರ್ ಆರ್ ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ವಾಲ್ಕಾಟ್ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ಸಮಾವೇಶದಲ್ಲಿ ಗುರುವಾರ ರಾತ್ರಿ ಅವರು ಮಾತನಾಡಿದರು. ಬಿಜೆಪಿ ಪಕ್ಷವು ಒಂದು ಧರ್ಮದವರನ್ನು ಇನ್ನೊಂದು ಧರ್ಮದವರ ಮೇಲೆ ಎತ್ತಿಕಟ್ಟುವುದು ಮಾಡುತ್ತಿದೆ. ಬಿಜೆಪಿಯವರಿಗೆ ಅಂಬೇಡ್ಕರ್ ಸಂವಿಧಾನದ ಬಗ್ಗೆ ಗೌರವವಿಲ್ಲ. ಸಂಘ ಪರಿವಾರದ ಮುಖವಾಣಿ ಆರ್ಗನೈಸರ್ ಓದಬೇಕು. ಅಂಬೇಡ್ಕರ್ ಸಂವಿಧಾನದ ಬಗ್ಗೆ ಏನು ಹೇಳಿದ್ದಾರೆ ಅನ್ನುವುದು ಗೊತ್ತಾಗುತ್ತೆ. ಸಾವರ್ಕರ್ ಏನು ಹೇಳಿದ್ರು, ಗೋಲವಾಲಕರ್ ಏನು ಹೇಳಿದರು ಅಂತ ಗೊತ್ತಾಗುತ್ತೆ ಎಂದು ತಿಳಿಸಿದರು.
ಮೋದಿ ಅವರು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತಿದ್ದಾರೆ. ಆದರೆ ಒಬ್ಬರೆ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದಾರೆಯೇ? ಕಾಂಗ್ರೆಸ್ನವ್ರು ಮುಸ್ಲಿಂರಿಗೆ ಶೇ.14, ಕ್ರೈಸ್ತ್ ಸಮುದಾಯದವರಿಗೆ ಶೇ.2 ರಷ್ಟು ಟಿಕೆಟ್ ನೀಡಿದ್ದೇವೆ. ದೇಶದ ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಒಂದೇ ಜಾತ್ಯಾತೀತ ಪಕ್ಷ, ಜೆಡಿಎಸ್ ಆ ಕಡೆಗೂ ಇಲ್ಲಾ ಈ ಕಡೆಗೂ ಇಲ್ಲಾ. ಜೆಡಿಎಸ್ ಗೆದ್ದೆತ್ತಿನ ಬಾಲ ಹಿಡಿಯುವವರು. ಅವರಿಗೆ ಸಿದ್ಧಾಂತವಿಲ್ಲ, ಬಿಜೆಪಿ ಗೆದ್ದರೆ ಬಿಜೆಪಿ, ಕಾಂಗ್ರೆಸ್ ಗೆದ್ರೆ ಕಾಂಗ್ರೆಸ್ ಬಾಲ ಹಿಡಿತಾರೆ ಎಂದು ಹರಿಹಾಯ್ದರು.
ಮುಸ್ಲಿಂ ಸಮುದಾಯಕ್ಕಿದ್ದ ಮೀಸಲಾತಿಯನ್ನೂ ತೆಗೆದು ಹಾಕಿ ಬಿಜೆಪಿಯವರು ದ್ವೇಷ ರಾಜಕಾರಣ, ಮತಗಳ ದೃವೀಕರಣ ಮಾಡುತ್ತಿದ್ದಾರೆ. ಸಿಟಿ ರವಿ ನನ್ನನ್ನ ಸಿದ್ದರಾಮುಲ್ಲಾ ಖಾನ್ ಅಂತ ಕರಿತಾರೆ, ಅವರ ಊರಲ್ಲಿ ಅವರಿಗೆ ಲೂಟಿ ರವಿ ಅಂತ ಕರಿತಾರೆ, ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಾರೆ ಎಂದು ದೂರಿದರು.