ರಾಯಚೂರು : ಬಿಜೆಪಿಯವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ. ರಾಯಚೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೂರಕ್ಕೆ ನೂರರಷ್ಟು ಸೋಲುತ್ತದೆ. ಪ್ರಧಾನಿ ಮೋದಿ ಕುರ್ಚಿ ಅಲ್ಲಾಡುತ್ತೆ ಎಂಬ ಸಿಎಂ ಸಿದ್ದರಾಮಯ್ಯರ ಹೇಳಿಕೆ ಕುರಿತು ಪ್ರತಿಕ್ರಿಯಿಸುವ ಮೂಲಕ ಬಿಜೆಪಿ ನಾಯಕರಿಗೆ ಸಚಿವರು ತಿರುಗೇಟು ನೀಡಿದರು.
"ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ರಾಜ್ಯದ ಜನರು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಕೊಟ್ಟಿದ್ದಾರೆ. ಬಿಜೆಪಿಯವರು ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿದ್ದರು. ಈಗ ಕಾಂಗ್ರೆಸ್ ಸರ್ಕಾರ ಬೀಳುತ್ತದೆ ಎಂದು ಹಗಲುಗನಸು ಕಾಣುತ್ತಿದ್ದಾರೆ" ಎಂದು ವ್ಯಂಗ್ಯವಾಡಿದರು.
ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರ ಮಾತನಾಡಿ, "ಪಾಪ ಜಗದೀಶ್ ಶೆಟ್ಟರ್ ಜೀವನಪೂರ್ತಿ ಒಂದೇ ಪಕ್ಷದಲ್ಲಿದ್ದು, ಈಗ ನಮ್ಮ ಕಡೆ ಬಂದಿದ್ದಾರೆ. ಆದರೆ ಬಸವರಾಜ್ ಬೊಮ್ಮಾಯಿ ಎಷ್ಟು ಪಕ್ಷ ಬದಲಿಸಿದ್ದಾರೆ, ನಾನು ನಿಮಗೆ ಹೇಳಬೇಕಾ? ಶೆಟ್ಟರ್ ಬಗ್ಗೆ ಹೇಳುವ ಮುನ್ನ ಬೊಮ್ಮಾಯಿ ಆತ್ಮಾವಲೋಕನ ಮಾಡಿಕೊಳ್ಳಲಿ" ಎಂದು ಸಚಿವರು ಟಾಂಗ್ ಕೊಟ್ಟರು.
ಭಗವಾಧ್ವಜ ಹಾರಿಸುವ ಯತ್ನ: "ಬೆಳಗಾವಿಯಲ್ಲಿ ಭಗವಾಧ್ವಜ ಹಾರಿಸಲು ಯತ್ನಿಸಿರುವಬಗ್ಗೆ ಮಾಹಿತಿಯಿಲ್ಲ. ಧ್ವಜ ಹಾರಿಸಿದರೆ ತಪ್ಪು. ರಾಷ್ಟ್ರಧ್ವಜವನ್ನು ಎಲ್ಲರೂ ಗೌರವಿಸಬೇಕು. ರಾಷ್ಟ್ರಧ್ವಜ ನಮ್ಮ ರಾಷ್ಟ್ರದ ಸ್ವಾಭಿಮಾನದ ಸಂಕೇತ" ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದರು.