ರಾಯಚೂರು: ಒಂದೆಡೆ ಕರಡಿ ಕುಣಿತ, ಪುರುಷ, ಮಹಿಳೆಯರಿಂದ ಡೊಳ್ಳು ಕುಣಿತ, ಕಂಸಾಳೆ, ಮತ್ತೊಂದೆಡೆ ವಿವಿಧ ಕಲಾ ತಂಡಗಳ ಪ್ರದರ್ಶನವನ್ನು ನೋಡಲು ಮನೆಗಳ ಮೇಲೆ, ರಸ್ತೆ ಬದಿಯಲ್ಲಿ ಸಾಲು ಸಾಲು ಸೇರಿದ ಸಾವಿರಾರು ಜನ. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ರಾಯಚೂರಿನಲ್ಲಿ.
ಮುಂಗಾರು ಸಾಂಸ್ಕೃತಿಕ ಹಬ್ಬದಲ್ಲಿ ಕಲಾ ತಂಡಗಳ ರಂಗು-ರಂಗಿನ ಮೆರವಣಿಗೆ
ರಾಯಚೂರಿನಲ್ಲಿ ನಡೆಯುತ್ತಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದಲ್ಲಿ ಕಲಾ ತಂಡಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಜೂನ್ 16ರಿಂದ ರಾಯಚೂರಿನಲ್ಲಿ ನಡೆಯುತ್ತಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಪ್ರಯುಕ್ತ ವಿವಿಧ ಕಲಾ ತಂಡಗಳ ಮೆರವಣಿಗೆ ಅದ್ಧೂರಿಯಾಗಿ ನಡೆದಿದ್ದು, ನೋಡುಗರ ಕಣ್ಮನ ಸೆಳೆಯಿತು. ಕಳೆದ 19 ವರ್ಷಗಳಿಂದ ನಡೆಯುತ್ತಿರುವ "ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ" ಹಲವಾರು ಆಕರ್ಷಣೆಗಳ ಕೇಂದ್ರ ಬಿಂದುವಾಗಿದೆ. ಮುನ್ನೂರುಕಾಪು ಸಮಾಜದ ನೇತೃತ್ವದಲ್ಲಿ ನಡೆಯುವ ಈ ಮುಂಗಾರು ಹಬ್ಬ ಅತ್ಯಂತ ವಿಜೃಂಭಣೆಯಿಂದ ನಡೆಯುತಿದ್ದು, ಮುನ್ನೂರುಕಾಪು ಸಮಾಜದ ಆರಾಧ್ಯ ದೇವತೆಯಾದ ಮಾತೆ ಲಕ್ಷ್ಮಮ್ಮ ದೇವಿ ದೇವಸ್ಥಾನದವರೆಗೆ ನಡೆದ ಕಲಾ ತಂಡಗಳ ಮೆರವಣಿಗೆ ಗಮನ ಸೆಳೆಯಿತು.
ದಾರಿಯುದ್ದಕ್ಕೂ ಆನೆ, ಎತ್ತುಗಳು, ಒಂಟೆಗಳು, ಬೃಹತ್ ಎತ್ತರದ ಮಾನವ, ಕಂಸಾಳೆ, ದೊಳ್ಳು ಕುಣಿತ ಹೀಗೆ ಸಾಲು ಸಾಲು ಅನೇಕ ಕಲಾ ತಂಡಗಳಿಂದ ಅಕರ್ಷಕ ನೃತ್ಯ ನಡೆಯಿತು. ಜೊತೆಗೆ ಗ್ರಾಮೀಣ ಭಾಗದ ಕಲೆಯ ಸೊಗಡು ಅನಾವರಣಗೊಂಡಿತು. ಇದಕ್ಕೆ ಉಜ್ಜಯಿನಿ ಪೀಠದ ಶ್ರೀ ಜಗದ್ಗುರು ಸಿದ್ದಲಗರಾಜ ದೇಶಿಕೇಂದ್ರ ಶಿವಾಚಾರ್ಯ ಹಾಗೂ ಶ್ರೀ ಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ನಂತರ ಕಲಾ ತಂಡಗಳ ಮೆರವಣಿಗೆಯಲ್ಲಿ ಸ್ವಾಮೀಜಿಗಳ ರಥದ ಮೆರವಣಿಗೆ ನಡೆಯಿತು.