ರಾಯಚೂರು: ತಾಲೂಕಿನ ಬಿಚ್ಚಾಲಿ ಗ್ರಾಮದಲ್ಲಿ ಜಪದಕಟ್ಟೆ ಅಪ್ಪಣ್ಣಾಚಾರ್ಯ ಸೇವಾ ಟ್ರಸ್ಟ್ ಸ್ವಾಧೀನದಲ್ಲಿರುವ 2.23 ಎಕರೆ ಜಮೀನನ್ನು ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಹಂಚಿಕೆ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದ್ದು, ಈ ಕುರಿತು ನ್ಯಾಯಾಲಯದಲ್ಲಿ ಆಕ್ಷೇಪಣೆ ಅರ್ಜಿ ಸಲ್ಲಿಕೆ ಮಾಡುವುದಾಗಿ ಟ್ರಸ್ಟ್‌ನ ಮುಖ್ಯಸ್ಥ ಕೃಷ್ಣಾಚಾರ್ ಬಾಡದ ಹೇಳಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಚ್ಚಾಲಿ ಗ್ರಾಮದ ಸರ್ವೇ ನಂ.35 ಮತ್ತು 37ರಲ್ಲಿನ 2.23 ಎಕರೆ ಸರ್ಕಾರಿ ಗೈರಾಣಿ ಜಮೀನನ್ನು 2006 ರಿಂದ ಟ್ರಸ್ಟ್‌ಗೆ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿತ್ತು. ಆದ್ರೆ ರಾಜಕೀಯ ಪ್ರಭಾವದಿಂದ ಮಂತ್ರಾಲಯ ಮಠಕ್ಕೆ ಜಮೀನು ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದರು.
ತುಂಗಭದ್ರಾ ನದಿ ತೀರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ತಪಸ್ಸು ಮಾಡಿದ ಸ್ಥಳದಲ್ಲಿ ಅವರ ಶಿಷ್ಯರಾಗಿದ್ದ ಅಪ್ಪಣ್ಣಾಚಾರ್ಯರು ಬೃಂದಾವನವನ್ನು ಸ್ಥಾಪಿಸಿಕೊಂಡಿದ್ದು, ಇಲ್ಲಿ ಕಳೆದ 7 ತಲೆಮಾರಿನಿಂದ ನಮ್ಮ ಕುಟುಂಬದವರು ಪೂಜಾ ಕೈಂಕರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಮಂತ್ರಾಲಯಕ್ಕೆ ಬರುವ ಭಕ್ತರು ಸಹ ಬಿಚ್ಚಾಲಿಗೂ ಆಗಮಿಸಿ ಪೂಜೆ, ಸೇವೆ ಸಲ್ಲಿಸಿ ಹೋಗುತ್ತಿದ್ದಾರೆ. ಈಗ ಹೆಚ್ಚಿನ ಪ್ರಸಿದ್ಧಿ ಪಡೆಯುತ್ತಿರುವುದರಿಂದ ನಮ್ಮ ಕುಟುಂಬವನ್ನು ದೂರವಿಟ್ಟು, ಸ್ಥಳದಲ್ಲಿ ಅಧಿಪತ್ಯ ಸಾಧಿಸಲು ಮಂತ್ರಾಲಯ ಮಠ ಮುಂದಾಗಿದೆ ಎಂದರು.
ಜಪದಕಟ್ಟೆ ಅಪ್ಪಣ್ಣಾಚಾರ್ಯ ಸೇವಾ ಟ್ರಸ್ಟ್ ಸದಸ್ಯರಿಂದ ಸುದ್ದಿಗೋಷ್ಠಿ ನಮ್ಮ ಪೂರ್ವಜರು ಬೃಂದಾವನಕ್ಕೆ ಸಮೀಪವಿರುವ ಸರ್ವೇ ನಂ.36ರಲ್ಲಿನ 6 ಗುಂಟೆಯನ್ನು ಗ್ರಾಮದ ಹಿರಿಯರಿಂದ ಖರೀದಿಸಿದ್ದರು. ಅದಕ್ಕೆ ಸಂಬಂಧಿಸಿದ ದಾಖಲೆಗಳು ಸಹ ನಮ್ಮ ಬಳಿಯಿವೆ. ಆದರೆ ಜಮೀನಿನ ಮಾಲೀಕರಾಗಿ ಐವರು ಸಹೋದರರಿದ್ದು, ಒಬ್ಬ ಸಹೋದರನಿಂದ 50 ಸಾವಿರ ರೂ. ಬೆಲೆ ಬಾಳುವ 6 ಗುಂಟೆ ಜಮೀನನ್ನು 27 ಲಕ್ಷ ರೂ.ಗೆ ರಾಘವೇಂದ್ರಸ್ವಾಮಿ ಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಖರೀದಿಸಿದ್ದಾರೆ. ಆ ಸ್ಥಳದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮಠದ ನಾಮಫಲಕ ಹಾಕಲು ಮುಂದಾದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನ ಕೇಳಲು ತೆರಳಿದಾಗ ಗುಂಡಾಗಳಿಂದ ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದರು.
ಈ ಕುರಿತು ಈಗಾಗಲೇ ಹೈಕೋರ್ಟ್‌ನಲ್ಲಿ ಧಾವೆ ಹಾಕಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಈ ಸಂಬಂಧ ಡಾ.ಸುಬುಧೇಂದ್ರ ತೀರ್ಥರೊಂದಿಗೆ ಚರ್ಚೆ ನಡೆಸಿದಾಗ ನೀವು ಕೇವಲ ಅರ್ಚಕರು, ಸ್ಥಳ ಮಂತ್ರಾಲಯಕ್ಕೆ ಮಠಕ್ಕೆ ಸೇರಿದ್ದು ಎಂದು ಹೇಳಿ ಕಳುಹಿಸಿದರು.
ಬಿಚ್ಚಾಲಿಯಲ್ಲಿನ ಬೃಂದಾವನ ಮೃತ್ತಿಕಾ ಬೃಂದಾವನವಲ್ಲ, ನಮ್ಮ ಪೂರ್ವಜರು ಸ್ಥಾಪನೆ ಮಾಡಿದ್ದು ನಮಗೆ ಸೇರಬೇಕು ಎಂದು ಹೇಳಿದರೂ ಅವರು ಒಪ್ಪುತ್ತಿಲ್ಲ. ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಆಸ್ತಿಯನ್ನು ಕಬಳಿಸಲು ಮುಂದಾಗಿರುವ ಮಂತ್ರಾಲಯ ಮಠದ ವಿರುದ್ಧ ಅನಿವಾರ್ಯವಾಗಿ ಬಹಿರಂಗವಾಗಿ ಮಾತನಾಡಬೇಕಾದ ಪರಿಸ್ಥಿತಿ ಎದುರಾಗಿದೆ. ನ್ಯಾಯಾಲಯದಲ್ಲಿಯೂ 2.23 ಎಕರೆ ಭೂಮಿ ಮಂಜೂರು ಸಂಬಂಧಿಸಿದಂತೆ ಪ್ರಶ್ನೆ ಮಾಡುವುದಾಗಿ ಕೃಷ್ಣಾಚಾರ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ರಾಘವೇಂದ್ರಾಚಾರ್ ಬಾಡದ, ಶ್ಯಾಮಾಚಾರ ಬಾಡದ್, ಪವನಾಚಾರ್ ಬಾಡದ್ ಇದ್ದರು.