ರಾಯಚೂರು: ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದ ವಾಹನ ಪಲ್ಟಿಯಾಗಿ ಓರ್ವ ಮೃತಪಟ್ಟಿದ್ದು, 15 ಜನ ಗಾಯಗೊಂಡ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ದೇವದುರ್ಗ ತಾಲೂಕಿನ ಶಾಖಾಪುರ-ಮುಷ್ಟೂರು ಗ್ರಾಮದ ನಡುವೆ ಈ ಘಟನೆ ಸಂಭವಿಸಿದೆ. ರಾಜಾಸಾಬ್ (60) ಎಂಬುವರು ಮೃತಪಟ್ಟಿದ್ದು, ಶಬ್ಬಿರ್ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನುಳಿದ 13 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಗೊಂಡರಲ್ಲಿ 4 ಜನರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆ, 4 ಜನರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನುಳಿದವರಿಗೆ ದೇವದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ದೇವದುರ್ಗ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ವಿವಾಹಕ್ಕಾಗಿ ರಾಮದುರ್ಗ ಗ್ರಾಮದಿಂದ ಟಂಟಂ ಮಾದರಿಯ ವಾಹನದಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯ ಇಳಿಜಾರು ಪ್ರದೇಶದಲ್ಲಿ ಚಾಲಕ ಕಲ್ಚಾ ಹಿಡಿದಾಗ ಏರ್ ಲಾಕ್ ಆಗಿ ನಿಯಂತ್ರಣ ತಪ್ಪಿದ್ದರಿಂದ ವಾಹನ ಪಲ್ಟಿಯಾಗಿ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.