ರಾಯಚೂರು: ಜಿಲ್ಲೆಯ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದ ಬಾಲಕನ ಮನೆಗಿಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಭೇಟಿ, ಮೃತನ ಕುಟುಂಬಕ್ಕೆ ಸ್ವಾಂತನ ಹೇಳಿ ಪರಿಹಾರ ಧನವನ್ನು ನೀಡಿದರು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಘೋಷಣೆ ಮಾಡಿದ್ದ ಐದು ಲಕ್ಷ ರೂಪಾಯಿ ಪರಿಹಾರದ ಚೆಕ್ಅನ್ನು ವಿತರಿಸಿದರು.
ಇತ್ತೀಚಿಗೆ ಕಲುಷಿತ ನೀರು ಸೇವಿಸಿ ರೇಕಲಮರಡಿ ಗ್ರಾಮದಲ್ಲಿರುವ ಬಾಲಕ ಸಾವನ್ನಪ್ಪಿ, 30ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ನಡೆದಿತ್ತು. ಜಿಲ್ಲೆಯ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದ ಜನರು ಕಲುಷಿತ ನೀರು ಸೇವಿಸಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಘಟನೆಗೆ ಗ್ರಾ.ಪಂ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಅಲ್ಲದೇ ರೇಕಲಮರಡಿ ಗ್ರಾಮದ ಬಾಲಕ ಕಲುಷಿತ ನೀರಿನ ಸೇವನೆಯ ಪರಿಣಾಮ ವಾಂತಿ, ಭೇದಿಯಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದರು.
ಭೇಟಿಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಮೇ.25ರಂದು ಈ ಘಟನೆ ನಡೆದಿದೆ. ತಕ್ಷಣ ಜಿಲ್ಲಾ ಪಂಚಾಯಿತಿ ಸಿಇಒ ಅವರು ಸ್ಥಳಕ್ಕೆ ಆಗಮಿಸಿದ್ದರು. ಜಿಲ್ಲಾಡಳಿತ ಮತ್ತು ಡಿಹೆಚ್ಒ ಸ್ಥಳೀಯ ವೈದ್ಯಾಧಿಕಾರಿಗಳಿಗೆ ಇಲ್ಲಿನ ಸ್ಥಿತಿಯನ್ನು ನಿಗಾವಹಿಸುವಂತೆ ತಿಳಿಸಲಾಗಿತ್ತು. ಜೊತೆಗೆ ಯಾರಿಗೂ ತೊಂದರೆಯಾಗದಂತೆ ಜಿಲ್ಲಾಡಳಿತ ಸೂಕ್ತವಾಗಿ ಕೆಲಸ ಮಾಡಿದೆ. ಮಳೆ ಬಂದಂತ ಸಂದರ್ಭದಲ್ಲಿ ಕಲುಷಿತ ನೀರಿಗೆ, ಪೈಪ್ ಲೈನ್ ವಾಟರ್ ಸೇರಿರುವುದರಿಂದ ಈ ರೀತಿಯ ಘಟನೆಗಳು ನಡೆಯುತ್ತವೆ ಎಂದರು.
ಜಿಲ್ಲೆಯ ಮತ್ತೊಂದು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥಗೊಂಡಿರುವ ಬಗ್ಗೆ ಮಾಹಿತಿ ಬಂದಿದೆ, ಅಲ್ಲಿಗೆ ಅಧಿಕಾರಿಗಳು ಮತ್ತು ನಾನು ಹೋಗಿ ಪರಿಶೀಲಿಸುತ್ತೇವೆ. ಈ ರೀತಿಯ ಘಟನೆಗಳು ಮರುಕಳಿಸದಂತೆ ಪಂಚಾಯಿತಿ ಮಟ್ಟದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಂತಹ ಸಂದರ್ಭದಲ್ಲಿ ಜವಾಬ್ದಾರಿ ವಹಿಸಬೇಕು. ಜೊತೆಗೆ ಜನರು ಸಹ ಸಹಕಾರ ಕೊಡಬೇಕು. ಎಲ್ಲೆಲ್ಲಿ ಈ ರೀತಿಯ ಪರಿಸ್ಥಿತಿ ಉಂಟಾಗುತ್ತದೆಯೋ ಅದನ್ನು ಸರಿಪಡಿಸಿ ಜನರಿಗೆ ಶುದ್ಧ ನೀರಿನ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ನಿನ್ನೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿದ್ದೀನಿ. ನಾಳೆ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ ಅಲ್ಲಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ, ಇಒಗಳಿಗೆ ಎಚ್ಚರಿಕೆ ಕೊಟ್ಟು, ಮತ್ತೆ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದರು. ಇನ್ನು ಈ ಘಟನೆ ಸಂಬಂಧ ಗ್ರಾಮ ಪಂಚಾಯತಿ ಪಿಡಿಒ ವಿರುದ್ಧ ಪ್ರಕರಣ ದಾಖಲಿಸಿ, ಪಿಡಿಒರನ್ನು ಅಮಾನತ್ತುಗೊಳಿಸಲಾಗಿತ್ತು. ಗ್ರಾಮದಲ್ಲಿ ಹಲವು ಜನರು ಅಸ್ವಸ್ಥಗೊಂಡಿರುವ ಹಿನ್ನೆಲೆಯಿಂದಾಗಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಚಿಕಿತ್ಸೆಯನ್ನು ಮುಂದುವರೆಸುತ್ತಿದ್ದಾರೆ. ರೇಕಲಮರಡಿ ಹಾಗೂ ಗೊರೆಬಾಳ ಗ್ರಾಮದ ಕಲುಷಿತ ನೀರು ಸೇವಿಸಿ ಸಾವು ಪ್ರಕರಣದ ಹಿನ್ನೆಲೆಯಲ್ಲಿ ತಪ್ಪಿತಸ್ಥ ಗ್ರಾಮ ಪಂಚಾಯತ ವಿರುದ್ಧ ಕ್ರಮಕ್ಕೆ ಸೂಚಿಸಿ, ರಾಯಚೂರು ಜಿಪಂ ಸಿಇಒಗೆ ನೊಟೀಸ್ ಜಾರಿಗೊಳಿಸಿದ್ದರು.
ಇದನ್ನೂ ಓದಿ:ಪ್ರತಾಪ್ ಸಿಂಹ ಸರ್ವಜ್ಞ ಇದ್ದಂತೆ ಅವರ ಚಿಂತನೆಗಳಿಗೆ ಸರಿಸಾಟಿಯಾಗುವ ರಾಜಕಾರಣಿಗಳು ಇಲ್ಲ: ಲಕ್ಷ್ಮೀ ಹೆಬ್ಬಾಳ್ಕರ್