ರಾಯಚೂರು: ಕಾರೊಂದು ಕುರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ 30 ಕುರಿಗಳು ಸಾವನ್ನಪ್ಪಿರುವ ದಾರುಣ ಘಟನೆ ರಾಯಚೂರು ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಇವು ರಾಯಚೂರು ತಾಲೂಕಿನ ಯಾಪಲದಿನ್ನಿ ಮೂಲದ ಜಗನಾಥ ಎನ್ನುವವರಿಗೆ ಸೇರಿದ ಕುರಿಗಳು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಪಶ್ಚಿಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಗಿದ್ದೇನು?: ತೆಲಂಗಾಣ ಮೂಲದ ಕಾರೊಂದು ಸಿಂಧನೂರು ಕಡೆಯಿಂದ ಬೆಳಗ್ಗೆ ಬರುತ್ತಿತ್ತು. ಇತ್ತ ಬೆಳಂಬೆಳಗ್ಗೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಮಾರ್ಗವಾಗಿ ಕುರಿಗಾಹಿ ತನ್ನ ಕುರಿಗಳನ್ನು ಕರೆದುಕೊಂಡು ಹೋಗುತ್ತಿದ್ದ. ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಿಂಡಾಗಿ ಹೋಗುತ್ತಿದ್ದ ಕುರಿಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗದ ಬಾನೆಟ್, ಬಂಪರ್ ನುಜ್ಜುಗುಜ್ಜಾಗಿದೆ. ಇತ್ತ 30 ಮೂವತ್ತು ಕುರಿಗಳು ತೀವ್ರ ಸ್ವರೂಪದಲ್ಲಿ ಗಾಯಗೊಂಡು ರಸ್ತೆ ಮೇಲೆ ಬಿದ್ದು ಒದ್ದಾಡಿ ಪ್ರಾಣ ಬಿಟ್ಟಿವೆ. ಇನ್ನೂ ಕೆಲ ಕುರಿಗಳು ತೀವ್ರವಾಗಿ ಗಾಯಗೊಂಡಿವೆ ಎನ್ನಲಾಗುತ್ತಿದೆ. ಘಟನೆಯಿಂದ 4 ಲಕ್ಷ ರೂಪಾಯಿ ನಷ್ಟವಾಗಿದ್ದು, ದಿಕ್ಕು ತೋಚದಂತಾಗಿದೆ ಎಂದು ಕುರಿಗಾಹಿ ಜಗನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ತುಮಕೂರು ಜಿಲ್ಲೆಯ ಗೊಲ್ಲಹಳ್ಳಿಯಲ್ಲಿ ಬೆಳೆದ ದಕ್ಷಿಣ ಆಫ್ರಿಕಾ ಡಾರ್ಪರ್ ಕುರಿ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ!
ಕಾರು ವಶಕ್ಕೆ: ಘಟನೆ ಕಾರಣವಾದ ಕಾರು ತೆಲಂಗಾಣದ ಪಾಸಿಂಗ್ ಹೊಂದಿದ್ದು, ಗೋವಾದಿಂದ ತೆಲಂಗಾಣಕ್ಕೆ ತೆರಳುತ್ತಿತ್ತು. ವಿಷಯ ತಿಳಿದು ಸ್ಥಳಕ್ಕೆ ದೌಡಯಿಸಿದ ಪೊಲೀಸರು ರಸ್ತೆ ಮೇಲೆ ಬಿದಿದ್ದ ಕುರಿಗಳನ್ನು ಪಕ್ಕಕ್ಕೆ ಸ್ಥಳಾಂತರ ಮಾಡಿ ಕಾರು, ಚಾಲಕ ಮತ್ತು ಕಾರಿನಲ್ಲಿದ್ದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.