ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಮಾನಸಗಂಗೋತ್ರಿಯ ಬಯಲು ರಂಗಮಂದಿರಲ್ಲಿ ಅಕ್ಟೋಬರ್ 6 ರಿಂದ 13ರ ವರೆಗೆ ಯುವ ಸಂಭ್ರಮ ಆಯೋಜಿಸಲಾಗಿದೆ ಎಂದು ಯುವ ಸಂಭ್ರಮ ಉಪಸಮಿತಿ ವಿಶೇಷಾಧಿಕಾರಿ, ಎಸ್‍ಪಿ ಸೀಮಾ ಲಾಟ್ಕರ್ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ದಸರಾ ಮಹೋತ್ಸವದಲ್ಲಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರತಿಭೆ ಅನಾವರಣಕ್ಕೆ ಯುವ ಸಂಭ್ರಮ ವೇದಿಕೆ ಕಲ್ಪಿಸುತ್ತದೆ. ಅದರಂತೆ ಈ ಬಾರಿಯೂ ದಸರಾದ ಮೊದಲ ಕಾರ್ಯಕ್ರಮವಾದ ಯುವ ಸಂಭ್ರಮವನ್ನು ಅ.6 ರಿಂದ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಅಕ್ಟೋಬರ್ 6 ರಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ ಸಿ ಮಹದೇವಪ್ಪ ಯುವ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ತಾರಾ ದಂಪತಿ ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
400ಕ್ಕೂ ಹೆಚ್ಚು ಕಾಲೇಜುಗಳು ಭಾಗಿ :ಯುವ ಸಂಭ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳು ಮತ್ತು ರಾಜ್ಯದ ಇತರೆ ವಿವಿಗಳ ಕಾಲೇಜುಗಳು ಸೇರಿದಂತೆ ಒಟ್ಟು 400ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಲಿವೆ. ಮೈಸೂರಿನಿಂದಲೇ 250 ಕಾಲೇಜುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಪ್ರತಿದಿನ 20 ತಂಡಗಳು ಪ್ರದರ್ಶನ ನೀಡಲಿದ್ದು, ಪ್ರತಿ ತಂಡಕ್ಕೆ 7-10 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಪ್ರತಿ ತಂಡದಲ್ಲಿ 30 ರಿಂದ 40 ಕಲಾವಿದರಿಗೆ ಅವಕಾಶ ನೀಡಲಾಗಿದೆ. 8 ದಿನಗಳ ಕಾರ್ಯಕ್ರಮದಲ್ಲಿ ಒಟ್ಟು 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ ಎಂದು ಹೇಳಿದರು.
20 ವಸ್ತು ವಿಷಯವಸ್ತುಗಳ ಆಯ್ಕೆ: ಈ ಬಾರಿಯ ಯುವ ಸಂಭ್ರಮಕ್ಕೆ ಭಾರತದ ಸ್ವಾತಂತ್ರ್ಯ ಚಳವಳಿ ಹಾಗೂ ಕರ್ನಾಟಕದ ಏಕೀಕರಣ, ಮೊಬೈಲ್‍ನಿಂದ ಪುಸ್ತಕದೆಡೆಗೆ ಯುವಜನತೆಯ ನಡಿಗೆ, ಚಂದ್ರಯಾನ-3ರ ಹಿನ್ನೆಲೆಯಲ್ಲಿ ವೈಜ್ಞಾನಿಕ ಪ್ರಗತಿಗೆ ಮೈಸೂರು ಸಂಸ್ಥಾನದ ಕೊಡುಗೆ, ಮಾದರಿ ಕರ್ನಾಟಕವಾಗುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪಾತ್ರ, ರಾಷ್ಟ್ರೀಯ ಭಾವೈಕ್ಯತೆ- ವಿವಿಧತೆಯಲ್ಲಿ ಏಕತೆ, ಮೈಸೂರು ದಸರಾ ವೈಭವ ಅಂದು-ಇಂದು, ಸುಳ್ಳು ಸುದ್ದಿ ಪರಿಣಾಮ ಮತ್ತು ನಿಯಂತ್ರಣ, ಆಧುನಿಕ ಸ್ಪರ್ಧಾ ಜಗತ್ತಿಗೆ ಶಿಕ್ಷಣವೇ ಮೂಲಮಂತ್ರ, ಮಾದಕ ವ್ಯಸನ ಮುಕ್ತ ಸಮಾಜದೆಡೆಗೆ ಯುವಜನತೆಯ ನಿಲುವು ಸೇರಿದಂತೆ ವಿವಿಧ 20 ವಸ್ತು ವಿಷಯಗಳನ್ನು ನೀಡಲಾಗಿದೆ. ಈ ವಿಷಯಗಳನ್ನು ಇಟ್ಟುಕೊಂಡು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪ್ರತಿದಿನ ಸಂಜೆ 5.30ರಿಂದ ರಾತ್ರಿ 10ರ ವರೆಗೆ ಕಾರ್ಯಕ್ರಮ ನಡೆಯಲಿದೆ ಎಂದರು.
ಯುವ ಸಂಭ್ರಮದಲ್ಲಿ ನಿತ್ಯ 20 ತಂಡಗಳು ಪ್ರದರ್ಶನ ನೀಡಲಿದ್ದು, ಈ ವೇಳೆ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳನ್ನು ಆಯ್ಕೆ ಮಾಡಿ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಯುವ ದಸರಾದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ಕಲಾವಿದರನ್ನು ಗೌರವಿಸುವುದರ ಜತೆಗೆ ಪ್ರಯಾಣ ಭತ್ಯೆ ಮತ್ತು ವಸ್ತ್ರ ವಿನ್ಯಾಸದ ಖರ್ಚುವೆಚ್ಚಗಳನ್ನು ನೀಡಲಾಗುತ್ತದೆ. ದೂರದಿಂದ ಬಂದವರಿಗೆ ಮಾತ್ರ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿವರಿಸಿದರು.
ಯುವ ಸಂಭ್ರಮದಲ್ಲಿ ಯಾವುದೇ ಲೋಪದೋಷಗಳು ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಅಗತ್ಯ ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕಳೆದ ಬಾರಿ 2.3 ಕೋಟಿ ರೂಪಾಯಿ ಖರ್ಚಾಗಿತ್ತು. ಈ ಬಾರಿ ಬರ ಇರುವುದರಿಂದ ಕಡಿಮೆ ವೆಚ್ಚದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಯುವ ಸಂಭ್ರಮ ಉಪಸಮಿತಿ ವಿಶೇಷಾಧಿಕಾರಿ ಸೀಮಾ ಲಾಟ್ಕರ್ ಹೇಳಿದರು. ಮಾಧ್ಯಮಗೋಷ್ಟಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷೆ ವಿ.ಆರ್. ಶೈಲಜ, ಕಾರ್ಯದರ್ಶಿ ಆರ್.ಪ್ರತಾಪ್, ಸಹ ಕಾರ್ಯದರ್ಶಿ ಡಾ. ನಿಂಗರಾಜು ಆರ್ ಇದ್ದರು.
ಇದನ್ನೂ ಓದಿ :ಮೈಸೂರು ದಸರಾ: ಸಾಮಾಜಿಕ ಸಂದೇಶ ಸಾರುವ ಸ್ತಬ್ಧಚಿತ್ರ ಸಿದ್ಧಪಡಿಸಿ- ಡಾ.ಹೆಚ್.ಸಿ.ಮಹದೇವಪ್ಪ ಸಲಹೆ