ಮೈಸೂರು:ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಸಿಬಿಐ ಅಲ್ಲ ಅವರಪ್ಪನ ಕರೆಸಿ ತನಿಖೆ ಮಾಡಿಸಲಿ, ನಾನ್ ಹೆದರಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಸಿಬಿಐ ಅಲ್ಲ ಅವರಪ್ಪನ ಕರೆಸಿ ತನಿಖೆ ಮಾಡಿಸಲಿ ನಾನ್ ಹೆದರಲ್ಲ.. ಜೆಡಿಎಸ್ ಪಕ್ಷ ಬಲಪಡಿಸುವ ಹಿನ್ನೆಲೆ ಶನಿವಾರ ಮೈಸೂರು ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಲು ಶುಕ್ರವಾರ ಮೈಸೂರಿಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಸಿಎಂ ಯಡಿಯೂರಪ್ಪ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ ತಕ್ಷಣ ಕೆಲವು ಪ್ರಕರಣಗಳನ್ನು ಸಿಬಿಐಗೆ ಕೊಟ್ಟರು. ಸಿಬಿಐ ಅಲ್ಲ ಅವರಪ್ಪನ ಕರೆಸಿ ತನಿಖೆ ಮಾಡಿಸಲಿ, ನಾನೇನು ಹೆದರಿ ಓಡಿಹೋಗುವುದಿಲ್ಲ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರದ ಯೋಜನೆಗಳಿಗೆ ಸಿಎಂ ಯಡಿಯೂರಪ್ಪ ಕೊಡಲಿಪೆಟ್ಟು ಕೊಟ್ಟಿದ್ದು, ನಾವು ಕೊಟ್ಟ ಅನುದಾನವನ್ನು ಸ್ಥಗಿತಗೊಳಿಸಿದ್ದಾರೆ. ನನ್ನ ಅವಧಿಯಲ್ಲಿ ಜಾರಿಗೆ ತಂದ ಬಡವರ ಬಂಧು, ಋಣಮುಕ್ತ ಕಾಯ್ದೆಯನ್ನು ತಡೆಹಿಡಿಯಲಾಗಿದೆ. ಇದೇನು ಯಡಿಯೂರಪ್ಪನ ಮನೆ ದುಡ್ಡಾ? ಅಥವಾ ಬಿಜೆಪಿ ಪಕ್ಷದ ದುಡ್ಡಾ ಎಂದು ಪ್ರಶ್ನಿಸಿದರು.
ನಾನು ಸಿಎಂ ಆಗಿದ್ದಾಗ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಶಾಸಕರುಗಳಿಗೆ ಪಕ್ಷಾತೀತವಾಗಿ ಅನುದಾನ ನೀಡಿದ್ದೇನೆ. ಆದರೆ,ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆಂಡಾಮಂಡಲರಾದರು.ಮಧ್ಯಂತರ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಕುಮಾರಸ್ವಾಮಿ, 224 ಕ್ಷೇತ್ರಗಳಿಗೂ ಒಟ್ಟಿಗೆ ಚುನಾವಣೆ ಬರಲಿದೆ ಎನ್ನುವ ಮೂಲಕ ಮಧ್ಯಂತರ ಚುನಾವಣೆ ಸುಳಿವು ನೀಡಿದರು. 12 ಅನರ್ಹ ಶಾಸಕರನ್ನು ಇಟ್ಟುಕೊಂಡು ರಚನೆ ಆಗಿರುವ ಬಿ ಎಸ್ ಯಡಿಯೂರಪ್ಪ ಸರ್ಕಾರ ಕೂಡ ಸಮ್ಮಿಶ್ರ ಸರ್ಕಾರವೇ ಎಂದು ಹರಿಹಾಯ್ದರು.