ಮೈಸೂರು:ಪಶು ವೈದ್ಯರನ್ನು ಮತ್ತು ಸಿಬ್ಬಂದಿಯನ್ನು ಮುಂಚೂಣಿ ಕಾರ್ಯಕರ್ತರು ಎಂದು ಘೋಷಣೆ ಮಾಡದಿದ್ದರೆ ಗ್ರಾಮೀಣ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಪಶು ವೈದ್ಯ ಸಂಘದ ರಾಜ್ಯಾಧ್ಯಕ್ಷ ಡಾ. ಸುರೇಶ್ ತಿಳಿಸಿದ್ದಾರೆ.
ಇಂದು 'ಈಟಿವಿ ಭಾರತ' ಜೊತೆ ಮಾತನಾಡಿದ ಡಾ. ಸುರೇಶ್, ಕರ್ನಾಟಕ ರಾಜ್ಯದಲ್ಲಿ 3 ಸಾವಿರ ಪಶು ವೈದ್ಯರು ಸೇರಿದಂತೆ 11 ಸಾವಿರ ಪಶು ವೈದ್ಯ ಸಿಬ್ಬಂದಿಗಳು ಇದ್ದಾರೆ. ನಮ್ಮ ಸೇವೆ ಗ್ರಾಮಾಂತರ ಮಟ್ಟದಲ್ಲಿ ಹೆಚ್ಚಾಗಿದ್ದು, ಇತ್ತೀಚೆಗೆ ಗ್ರಾಮಾಂತರ ಮಟ್ಟದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಇಲ್ಲಿ ಜಾನುವಾರುಗಳ ಜೊತೆ ರೈತರು ಬರುತ್ತಾರೆ, ಅವರಿಗೆ ಸೋಂಕು ಇದ್ದರೆ ತಿಳಿಸುವುದಿಲ್ಲ ಎಂದರು.
ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ ಇದರ ಜೊತೆಗೆ ಪಶುವೈದ್ಯ ಮತ್ತು ಸಿಬ್ಬಂದಿಗಳು ಹಳ್ಳಿಯಿಂದ ಹಳ್ಳಿಗೆ ಹೋಗಬೇಕಾಗಿರುವುದರಿಂದ ಸೋಂಕು ಭಯ ಇದ್ದು ಸುರಕ್ಷತೆ ದೃಷ್ಟಿಯಿಂದ ನಮಗೂ ಲಸಿಕೆ ಹಾಕಬೇಕು, ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಬೇಕು. ಕೇಂದ್ರ ಸರ್ಕಾರ ಈಗಾಗಲೇ ಈ ಬಗ್ಗೆ ಆದೇಶವನ್ನು ಹೊರಡಿಸಿದ್ದು, ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ ಪಶು ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಕಳೆದ ವರ್ಷ ನಮನ್ನು ಕೊರೊನಾ ವಾರಿಯರ್ಸ್ ಎಂದು ಘೋಷಿಸುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಭರವಸೆಯನ್ನು ಈಡೇರಿಸಿಲ್ಲ ಎಂದರು.
ಈ ಬಗ್ಗೆ ಎಲ್ಲರಿಗೂ ಮನವಿ ನೀಡಿ ಸಾಕಾಗಿದೆ. ಬೆಂಗಳೂರಿನ ಚಿತಗಾರಾದ ಕರ್ತವ್ಯಕ್ಕಾಗಿ 40 ಜನ ಪಶು ವೈದ್ಯರನ್ನು ನೇಮಕ ಮಾಡಿದ್ದು, ಅದರಲ್ಲಿ ಇಬ್ಬರು ಪಶುವೈದ್ಯರು ಕೋವಿಡ್ನಿಂದ ಮೃತ ಪಟ್ಟಿದ್ದಾರೆ. ಈಗಲಾದರೂ ಕರ್ನಾಟಕ ಸರ್ಕಾರ ರಾಜ್ಯದ ಪಶು ವೈದ್ಯರು ಹಾಗೂ ಸಿಬ್ಬಂದಿಯನ್ನು ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಿ, ಲಸಿಕೆ ನೀಡಬೇಕು ಹಾಗೂ ಸುರಕ್ಷತಾ ಕಿಟ್ ನೀಡಬೇಕು. ಇಲ್ಲದಿದ್ದರೆ ಗ್ರಾಮಾಂತರ ಸೇವೆಯನ್ನು ಸ್ಥಗಿತಗೊಳಿಸಲು ತೀರ್ಮಾನ ಮಾಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಪಶುವೈದ್ಯ ಸಂಘದ ರಾಜ್ಯಾಧ್ಯಕ್ಷ ಡಾ. ಸುರೇಶ್ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.