ಮೈಸೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂತ್ರಿಮಂಡಲ ಭ್ರಷ್ಟರ ಕೂಟ, ಶಾಸಕರನ್ನು ಖರೀದಿಸಿ ಅವರನ್ನು ಸಚಿವರನ್ನಾಗಿಸುವ ಮೂಲಕ ಕೆಟ್ಟ ಆಡಳಿತ ನಡೆಸುತ್ತಿದ್ದಾರೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.
ನಗರದ ಆರ್ ಗೇಟ್ ಮುಂಭಾಗ ತಾಂತ್ರಿಕ ವಿದ್ಯಾರ್ಥಿಗಳಿಗೆ ಆನ್ಲೈನ್ ಪರೀಕ್ಷೆ ನಡೆಸುವಂತೆ ಒತ್ತಾಯಿಸಿ, ಪ್ರತಿಭಟನೆ ನಡೆಸಿದ ಅವರು, ರಾಜ್ಯ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಏಜೆಂಟರಂತೆ ವರ್ತಿಸುತ್ತಿದೆ. ಆನ್ಲೈನ್ನಲ್ಲಿ ಪಾಠ ಮಾಡಿ, ಪರೀಕ್ಷೆ ನಡೆಸುವಂತೆ ಒತ್ತಾಯಿಸಿದರು.
ಸಿಎಂ ವಿರುದ್ಧ ವಾಟಾಳ್ ನಾಗರಾಜ್ ವಾಗ್ದಾಳಿ ಯಡಿಯೂರಪ್ಪನವರಿಗೆ ವಿದ್ಯಾರ್ಥಿಗಳ ಕಷ್ಟದ ಅರಿವಿಲ್ಲ. ಮಂತ್ರಿಮಂಡಲದಲ್ಲಿ ಭ್ರಷ್ಟರ ಕೂಟ ರಚನೆ ಮಾಡಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಯೋಗ್ಯತೆ ಇಲ್ಲದವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಮಂತ್ರಿಮಂಡಲದ ಗೌರವ, ಗಾಂಭೀರ್ಯತೆ ಯಾರಲ್ಲಿಯೂ ಕಾಣುತ್ತಿಲ್ಲ. ಪ್ರಜಾಪ್ರಭುತ್ವದ ಬಗ್ಗೆ ಗೌರವ ಇಲ್ಲ, ಪಕ್ಷಾಂತರಿಗಳನ್ನು ಕಟ್ಟಿಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
7 ಜನ ಪಕ್ಷಾಂತರಗಳನ್ನು ಸೇರಿಸಿಕೊಂಡು ಮಂತ್ರಿಮಂಡಲವನ್ನು 3 ವರ್ಷದ ಬಳಿಕ ವಿಸ್ತರಣೆ ಮಾಡುತ್ತಿದ್ದಾರೆ. ದಿಕ್ಕೆಟ್ಟ ಆಡಳಿತ, ವ್ಯಾಪಾರಿ ಆಡಳಿತದ ಸರ್ಕಾರ ಇದು. ಪಕ್ಷಾಂತರದ ಮಹಾಪ್ರಭು ಯಡಿಯೂರಪ್ಪ ಎಂದು ವಾಟಾಳ್ ವಾಗ್ದಾಳಿ ನಡೆಸಿದರು.