ಪ್ರೊ.ಭಾಷ್ಯಂ ಸ್ವಾಮೀಜಿ ಹೇಳಿಕೆ ಮೈಸೂರು:ನಗರದ ಪ್ರಸಿದ್ಧ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದಂದು ಎರಡು ಲಕ್ಷಕ್ಕೂ ಅಧಿಕ ತಿರುಪತಿ ಮಾದರಿಯ ಲಡ್ಡುಗಳನ್ನು ಭಕ್ತರಿಗೆ ಉಚಿತವಾಗಿ ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ದೇವಾಲಯದ ಸಂಸ್ಥಾಪಕ ನಾಡೋಜ ಪ್ರೊ.ಭಾಷ್ಯಂ ಸ್ವಾಮೀಜಿ ತಿಳಿಸಿದ್ದಾರೆ.
ವಿಜಯನಗರದ ಎರಡನೇ ಹಂತ ಸಮೀಪದಲ್ಲಿರುವ ದೇವಾಲಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಕ್ರೈಸ್ತ ವರ್ಷಾರಂಭದ ದಿನ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಲಡ್ಡುಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಜನವರಿ 1ರಂದು ಬೆಳಿಗ್ಗೆ 4 ಗಂಟೆಯಿಂದ ಪ್ರಾರಂಭಿಸಿ ಯೋಗಾನರಸಿಂಹಸ್ವಾಮಿಗೆ ವಿಶೇಷ ಅಲಂಕಾರ ಮತ್ತು ಶ್ರೀರಂಗಂಕ್ಷೇತ್ರ, ಮಧುರೈ ಕ್ಷೇತ್ರಗಳಿಂದ ತರಿಸಿರುವ ವಿಶೇಷ 'ತೋಮಾಲೆ' ಮತ್ತು ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ 'ಸಹಸ್ರನಾಮರ್ಚನೆ' ಮತ್ತು ದೇವಾಲಯದ ಉತ್ಸವ ಮೂರ್ತಿ ಶ್ರೀಮಲಯಪ್ಪನ್ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವಿಗೆ ದೇವಾಲಯದ ಆವರಣದಲ್ಲಿ 'ಏಕಾದಶ ಪ್ರಾಕಾರೋತ್ಸವ' ಹಾಗೂ ಇಪ್ಪತ್ತು ಕ್ವಿಂಟಾಲ್ ಪುಳಿಯೋಗರೆ ನಿವೇದನೆ ಮಾಡಲಾಗುವುದು. ಈ ಸಂದರ್ಭದಲ್ಲಿ ಎಲ್ಲ ಭಕ್ತಾದಿಗಳಿಗೆ ಲಡ್ಡು ವಿತರಿಸಲಾಗುವುದು ಎಂದರು.
1994ರಿಂದ ಅಂದಾಜು ಒಂದು ಸಾವಿರ ಲಡ್ಡು ವಿತರಣೆಯಿಂದ ಈ ಕೆಲಸ ಪ್ರಾರಂಭವಾಗಿದೆ. ಕಳೆದ ಹಲವಾರು ವರ್ಷಗಳಿಂದ ಪ್ರತಿ ವರ್ಷವೂ ಲಡ್ಡು ಪ್ರಸಾದವನ್ನು ವಿತರಣೆ ಮಾಡಲಾಗುತ್ತಿದೆ. ಪ್ರಸಾದವನ್ನು ವಿಶೇಷವಾಗಿ 60 ಮಂದಿ ನುರಿತ ಬಾಣಸಿಗರಿಂದ ತಯಾರಿಸಲಾಗಿದೆ. ಡಿ.20ರಿಂದ ಪ್ರಾರಂಭಿಸಿ ಡಿ.31ರವರೆಗೆ ತಯಾರಿ ಕಾರ್ಯ ನಡೆಯುತ್ತಿದೆ. ಈ ವರ್ಷ ಅಂದಾಜು (2,000) ಗ್ರಾಂ ತೂಕದ (15,000) ಲಡ್ಡುಗಳು ಹಾಗೂ (150)ಗ್ರಾಂ ತೂಕದ (2 ಲಕ್ಷ) ಲಡ್ಡುಗಳನ್ನು ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಯಾವುದೇ ಜಾತಿ, ಮತ ಮತ್ತು ಭೇದವಿಲ್ಲದೆ ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದರು.
ಲೋಕಕಲ್ಯಾಣಕ್ಕಾಗಿ ವಿವಿಧ ಕಾಯಕ್ರಮ:ದೇವಾಲಯದ ಎನ್.ಶ್ರೀನಿವಾಸನ್ ಮಾತನಾಡಿ, ಲೋಕ ಕಲ್ಯಾಣಾರ್ಥ ಯಾವುದೇ ಜಾತಿ, ಮತಗಳ ಭೇದವಿಲ್ಲದೆ ಪ್ರಪಂಚದ ಎಲ್ಲೆಡೆ ಆಚರಿಸುವ ಕ್ರೈಸ್ತ ವರ್ಷಾರಂಭದ ಹಿನ್ನೆಲೆಯಲ್ಲಿ ವಿಶ್ವಶಾಂತಿ, ಭ್ರಾತೃತ್ವ ಮತ್ತು ಸರ್ವಧರ್ಮ ಸಮನ್ವಯತೆಗಾಗಿ ಮತ್ತು ನಾಡಿನ ಎಲ್ಲಾ ಜನರ ಒಳಿತಿಗಾಗಿ ಪ್ರಾರ್ಥಿಸಿ ಲಡ್ಡು ಪ್ರಸಾದ ನಿವೇದನೆ ಮತ್ತು ಭಕ್ತಾದಿಗಳಿಗೆ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಕೊರೊನಾ ಅಲೆ ಆರಂಭಗೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಆತಂಕಪಡುವ ಅಗತ್ಯವಿಲ್ಲವೆಂದು ಮಾರ್ಗಸೂಚಿ ನೀಡಿವೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತಾರು ತಮ್ಮ ಆರೋಗ್ಯವನ್ನು ಕಾಪಾಡಿಕ್ಕೊಳ್ಳುವ ದೃಷ್ಟಿಯಿಂದ ಸ್ಯಾನಿಟೈಸರ್, ಮಾಸ್ಕ್ ಬಳಸಿ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಇದನ್ನೂಓದಿ:ಸಿದ್ದೇಶ್ವರ ಶ್ರೀಗಳ ತತ್ವಾದರ್ಶ ಪಠ್ಯಪುಸ್ತಕದಲ್ಲಿ ಅಳವಡಿಸಬೇಕು: ಸ್ವೀಕರ್ ಯು.ಟಿ. ಖಾದರ್