ಮೈಸೂರು:ದಸರಾ ಜಂಬೂಸವಾರಿಯ ದಿನ ಕುಶಾಲತೋಪು ಸಿಡಿಸುವ ಫಿರಂಗಿ ಗಾಡಿಗಳಿಗಿಂದು ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಫಿರಂಗಿ ತಾಲೀಮಿಗೆ ಚಾಲನೆ ನೀಡಲಾಯಿತು. ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಹೊರಡುವ ಮುನ್ನ ನಾಡ ಅಧಿದೇವತೆ ಆಸೀನಳಾಗುವ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆಯ ಬಳಿಕ, ಜಂಬೂಸವಾರಿ ಮೆರವಣಿಗೆ ವೇಳೆ 21 ಕುಶಾಲ ತೋಪುಗಳನ್ನು ಸಿಡಿಸುವ ತಾಲೀಮು ನಾಳೆಯಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಅರಮನೆಯ ಆನೆ ಬಾಗಿಲಿನಲ್ಲಿರುವ 11 ಫಿರಂಗಿ ಗಾಡಿಗಳಿಗೆ ಪೂಜೆ ನಡೆಯಿತು. ನಗರದ ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ ಮತ್ತು ಅರಣ್ಯಾಧಿಕಾರಿಗಳು ಭಾಗವಹಿಸಿದ್ದರು.
ಫಿರಂಗಿ ಗಾಡಿಗಳಿಗೆ ಪೂಜೆ ನೆರವೇರಿಸಿದ ಅರ್ಚಕ ಪ್ರಹ್ಲಾದ್ ರಾವ್ ಮಾತನಾಡಿ, "ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡಿದ ಬಳಿಕ 21 ಕುಶಾಲತೋಪುಗಳನ್ನು ಸಿಡಿಸುತ್ತಾರೆ. ಇದು ದೇವಿಗೆ ಮತ್ತು ಆನೆಗಳಿಗೆ ಗೌರವ ಕೊಡುವ ಹಾಗೂ ವಿಜಯದ ಸಂಕೇತ. ಫಿರಂಗಿ ತಾಲೀಮಿಗೂ ಮೊದಲು ಎಲ್ಲಾ ಕಾರ್ಯಗಳಿಗೂ ವಿಜಯವಾಗಲಿ ಎಂದು ವಿಜಯ ಗಣಪತಿ ಹೆಸರಿನಲ್ಲಿ ಪೂಜೆ ಮಾಡುತ್ತೇವೆ. ನಂತರ ಚಾಮುಂಡೇಶ್ವರಿಗೆ ಪೂಜೆ ಮಾಡಿ ಮೃತ್ಯುಂಜಯ ಮಂತ್ರ ಹೇಳಿ ತಾಲೀಮಿನಲ್ಲಿ ಭಾಗಿಯಾಗುವವರಿಗೆ ಯಾವುದೇ ತೊಂದರೆಯಾಗಬಾರದು" ಎಂದು ಪ್ರಾರ್ಥಿಸುತ್ತೇವೆ ಎಂದರು.
"ಕುಶಾಲತೋಪು ಸಿಡಿಸುವುದು ಗೌರವದ ಸಂಕೇತ. ರಾಷ್ಟ್ರಪತಿಯವರಿಗೆ ಗೌರವ ಸೂಚಕವಾಗಿ 21 ಬಾರಿ ಮತ್ತು ಇತರ ಗಣ್ಯರಿಗೆ 8 ಬಾರಿ ಸಿಡಿಸುತ್ತಾರೆ. ಇದೇ ರೀತಿ ಚಾಮುಂಡೇಶ್ವರಿಗೆ ಹಾಗೂ ಆನೆಗಳಿಗೆ ಗೌರವ ಸೂಚಿಸಲು ಕುಶಾಲತೋಪು ಸಿಡಿಸಲಾಗುತ್ತದೆ. ನಾಳೆಯಿಂದ ಫಿರಂಗಿ ತಾಲೀಮು ಶುರುವಾಗಲಿದೆ" ಎಂದು ಅವರು ಹೇಳಿದರು.