ಮೈಸೂರು: ಭರ್ಜರಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಮೂವರು ಮನೆಗಳ್ಳರನ್ನು ಬಂಧಿಸಿದ್ದಾರೆ.
ಮೈಸೂರಿನ ರಾಜೀವ್ ನಗರದ ಫಯಾಜ್, ಅಹ್ಮದ್ ಹಾಗೂ ಇಮ್ತಿಯಾಜ್ ಅಹಮದ್ ಬಂಧಿತ ಆರೋಪಿಗಳು. ಮೈಸೂರಿನ ರಿಂಗ್ ರಸ್ತೆಯ ನಾಯ್ಡು ನಗರದ ಜಂಕ್ಷನ್‍ನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಯಾಂಟ್ರೋ ಕಾರಿನಲ್ಲಿ ಮನೆಗಳ್ಳತನ ಮಾಡಲು ಉಪಯೋಗಿಸುತ್ತಿದ್ದ ಪರಿಕರಗಳು ಹಾಗೂ ಕಳ್ಳತನ ಮಾಡುವಾಗ ತಪ್ಪಿಸಿಕೊಳ್ಳಲು ಸಲುವಾಗಿ ಬಳಸುತ್ತಿದ್ದ ಪಿಸ್ತೂಲ್ ಮಾದರಿಯ ಏರ್ ಗನ್ ಪತ್ತೆಯಾಗಿವೆ. ಈ ಸಂಬಂಧ ಆರೋಪಿಗಳನ್ನು ವಿಚಾರಣೆ ಮಾಡಲಾಗುತ್ತಿದೆ.
ಫೆ.10ರ ರಾತ್ರಿ ಮೈಸೂರು ನಗರದ ಎನ್.ಆರ್. ಪೊಲೀಸ್ ಠಾಣಾ ವ್ಯಾಪ್ತಿಯ ಸುಭಾಷ ನಗರದ ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಈ ಸಂಬಂಧ ಮನೆಯವರು ಬೀಗ ಹಾಕಿಕೊಂಡು ಹೋಗಿದ್ದನ್ನು ಗಮನಿಸಿ, ಮನೆಯ ಕಿಟಕಿಯನ್ನು ಮುರಿದು ಮನೆಯೊಳಗೆ ನುಗ್ಗಿ 800 ಗ್ರಾಂ ತೂಕದ ಚಿನ್ನಾಭರಣ ಹಾಗೂ 60 ಸಾವಿರ ರೂ. ನಗದು ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನಂತರ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಕದ್ದು ತಂದ ಚಿನ್ನಾಭರಣಗಳನ್ನು ವಿಲೇವಾರಿ ಮಾಡಿದ್ದ ಮಂಡಿ ಮೊಹಲ್ಲ ನಿವಾಸಿ ಮರಿಯಮ್ ಜ್ಯೂಯಲರ್ಸ್ನ ಚಿನ್ನದ ವ್ಯಾಪಾರಿ ಮೊಹಮದ್ ಪರ್ವೀಜ್ (41) ಎಂಬಾತನನ್ನು ಕೂಡ ಫೆ.26 ರಂದು ಬಂಧಿಸಲಾಗಿದೆ.