ಮೈಸೂರು:ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಮೂವರನ್ನು ಬಂಧಿಸಿ, ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ.
ಬಂಧಿತರಿಂದ 14,070 ರೂ.ನಗದು, 04 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ನಿಲುವಾಗಿಲು ಗ್ರಾಮದ ರಘುನಂದ(35), ಹಾಸನ ಜಿಲ್ಲೆಯ ಹಿರಿಸಾವೆ ಗ್ರಾಮದ ಪ್ರದೀಪ್(29), ಉಡುಪಿ ಜಿಲ್ಲೆಯ ಹೆಣಗುಡ್ಡದ ನಿವಾಸಿ ಶ್ವೇತಾ (30) ಬಂಧಿತರು.
ಮಾಡಿಗೋಕುಲಂ 3ನೇ ಹಂತ, 13ನೇ ಕ್ರಾಸ್‍ನಲ್ಲಿರುವ ಮನೆಯೊಂದರಲ್ಲಿ ಹೊರ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಮಹಿಳೆಯರನ್ನು ಕರೆಯಿಸಿಕೊಂಡು ಅವರಿಗೆ ಹಣದ ಅಮಿಷವೊಡ್ಡಿ, ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.
ಈ ಸಂಬಂಧ ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಈ ಮೊದಲು ಲಷ್ಕರ್ ಹಾಗೂ ವಿಜಯನಗರ ಪೊಲೀಸ್ ಠಾಣೆಗಳಲ್ಲಿ ಇದೇ ವಿಚಾರವಾಗಿ ಐಟಿಪಿ ಕಾಯ್ದೆ ಅನ್ವಯ ಪ್ರಕರಣಗಳು ದಾಖಲಾಗಿವೆ. ಆದರೂ ಸಹ ಜಾಮೀನಿನ ಮೇಲೆ ಹೊರ ಬಂದು ಮತ್ತೆ ಇದೇ ಚಾಳಿಯನ್ನು ಮುಂದುವರೆಸಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.