ಮೈಸೂರು : ನಗರದ ವಿವಿ ಪುರಂ ಪೊಲೀಸರ ನಿದ್ದೆಗೆಡಿಸಿದ್ದ ಐಷಾರಾಮಿ ಕಾರುಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಕಳ್ಳತನ ಪ್ರಕರಣವನ್ನು ಇದೀಗ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಸಂಬಂಧ ಬೆಂಗಳೂರು ಮೂಲದ ಕುಖ್ಯಾತ ವೃತ್ತಿಪರ ಖದೀಮನನ್ನು ಬಂಧಿಸಿದ್ದು, ಈತ ಒಬ್ಬನೇ ಕಾರು ಕಳ್ಳತನದ ಜೊತೆಗೆ ಮನೆಗಳ್ಳತನ ಸಹ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಐಷಾರಾಮಿ ಕಾರುಗಳ ಸರಣಿ ಕಳ್ಳತನ ಮಾಡುತ್ತಿದ್ದ ಈತ, ಮೈಸೂರಿನಲ್ಲೇ 2-3 ಐಷರಾಮಿ ಕಾರುಗಳನ್ನು ಕದ್ದು ಬೇರೆಯವರಿಗೆ ಮಾರಾಟ ಮಾಡಿದ್ದ. ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪ್ರಕರಣ ಪೊಲೀಸರ ನಿದ್ದೆಗೆಡಿಸಿತ್ತು. ಈತ ಮೈಸೂರಿನಲ್ಲಿ ಮಾತ್ರವಲ್ಲದೆ ಬೇರೆ ಕಡೆಗಳಲ್ಲಿಯೂ ಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ನಗರದ ಯಾದವಗಿರಿ ನಿವಾಸಿಯಾದ ಬಿ.ಸತೀಶ್ ಎಂಬುವವರ ಕಾರನ್ನು ಕಾರು ಜುಲೈ 25 ರಂದು ರಾತ್ರಿ ಆರೋಪಿ ಕಳವು ಮಾಡಿದ್ದ. ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದರು.
ಜಿಪಿಎಸ್ ಕೊಟ್ಟ ಸುಳಿವು : ಕಳ್ಳತನವಾದ ಕಾರಿನಲ್ಲಿ ಜಿಪಿಎಸ್ ತಂತ್ರಜ್ಞಾನ ಇದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಜಿಪಿಎಸ್ ತಂತ್ರಜ್ಞಾನದ ನೆರವು ಪಡೆದು, ಕಾರ್ಯಾಚರಣೆ ಚುರುಕುಗೊಳಿಸಿ ಐಟಿ ವಿಭಾಗದ ಮೂಲಕ ಟ್ರಾಕಿಂಗ್ ಮಾಡಿ ಅಪರಾಧಿಯ ಬೆನ್ನತ್ತಿದರು. ಕಾರಿನಲ್ಲಿ ಜಿಪಿಎಸ್ ಇರುವ ಬಗ್ಗೆ ಕಳ್ಳನಿಗೆ ಮಾಹಿತಿ ಇರಲಿಲ್ಲ. ಖಚಿತ ಮಾಹಿತಿಯನ್ನು ಪಡೆದ ಪೊಲೀಸ್ ತಂಡವು ಬೆಂಗಳೂರಿನ ಒಂದು ಸ್ಥಳದಲ್ಲಿ ಕಾರನ್ನು ಸುತ್ತುವರೆದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಮಾಜಿ ಶಾಸಕ ಹಾಗೂ ಉದ್ಯಮಿಯೊಬ್ಬರ ಕಾರುಗಳ ಕಳ್ಳತನ :ಕಳ್ಳನನ್ನು ಬಂಧಿಸಿ ತನಿಖೆ ಕೈಗೊಂಡ ಪೊಲೀಸರು, ಆತನನ್ನು ವಿಚಾರಣೆ ನಡೆಸಿದಾಗ ಮೈಸೂರಿನಲ್ಲಿಯೇ ಮತ್ತೆರೆಡು ಕಾರಗಳನ್ನ ಕದ್ದೊಯ್ದ ಪ್ರಕರಣವೂ ಬೆಳಕಿಗೆ ಬಂದಿದೆ. ಜೂನ್ 5 ರಂದು ಮಾಜಿ ಶಾಸಕ ಎಂ.ಶಿವಣ್ಣ ಅವರ ಮೈಸೂರಿನ ಮನೆಯಲ್ಲಿ ನಿಂತಿದ್ದ ಕಾರನ್ನು ಮಧ್ಯರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಕಳವು ಮಾಡಲಾಗಿತ್ತು. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೊಂಚುಹಾಕಿದ ಕಳ್ಳ ಮನೆ ಹಿಂಬಾಗಿಲಿನಿಂದ ಬಂದು ಹಾಲ್ ನಲ್ಲಿ ಇದ್ದ ಕೀಯನ್ನು ತೆಗೆದುಕೊಂಡು ಕಾರನ್ನು ಈತ ನಿರ್ಭಯವಾಗಿ ಕದ್ದು ಪರಾರಿಯಾಗಿದ್ದ.
ಜೊತೆಗೆ ಶಾಸಕರ ಮನೆಯಿಂದ 100 ಮೀಟರ್ ದೂರದಲ್ಲಿ ಇರುವ ಉದ್ಯಮಿಯೊಬ್ಬರ ಮನೆಯಲ್ಲಿಯೂ ಕಾರನ್ನು ಕದ್ದಿದ್ದ. ವಿಧಾನಸಭೆ ಚುನಾವಣೆಯ ಮತ ಎಣಿಕೆ ಹಿಂದಿನ ದಿನ ರಾತ್ರಿ ಮನೆ ಮುಂದೆ ಎಸ್ ಯುವಿ ಕಾರನ್ನು ನಿಲ್ಲಿಸಿದ್ದರು. ರಾತ್ರಿ 12 ಗಂಟೆಯವರೆಗೂ ಅಲ್ಲೇ ನಿಂತಿದ್ದ ಕಾರು ಮರುದಿನ ಬೆಳಗ್ಗೆ ನಾಪತ್ತೆಯಾಗಿತ್ತು. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಒಟ್ಟು 2 ದೂರು ದಾಖಲಾಗಿತ್ತು. ಈ ಕಾರನ್ನು ಸಹ ಬಂಧಿತ ಆರೋಪಿಯೇ ಕಳ್ಳತನ ಮಾಡಿದ್ದಾನೆಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ವ್ಯಾಪಕವಾಗಿ ಜಾಲ ಹೊಂದಿದ್ದ ಕಳ್ಳ : ವೃತ್ತಿಪರ ಕಾರು ಕಳ್ಳ ಗುಜರಾತ್, ಮುಂಬೈ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ವ್ಯಾಪಕವಾದ ಗ್ರಾಹಕರ ಜಾಲ ಹೊಂದಿದ್ದಾನೆ ಎಂದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಕದ್ದ ಕಾರುಗಳನ್ನು ಜಾಲದಲ್ಲಿನ ಖರೀದಿದಾರರಿಗೆ ಕೂಡಲೇ ಮಾರಾಟ ಮಾಡುತ್ತಿದ್ದ. ಕಳೆದ ಎರಡು ತಿಂಗಳಿನಿಂದ ಪೊಲೀಸರ ಕೈಗೆ ಸಿಗದಂತೆ ಎಚ್ಚರ ವಹಿಸಿ ಟೆಕ್ಕಿಗಳನ್ನು ಮೀರಿಸುವ ಪ್ರಾವಿಣ್ಯತೆ ಹೊಂದಿದ್ದ ಕಳ್ಳ. ಈತನನ್ನು ಬಂಧಿಸಲು ಈವರೆಗೂ ಯಾವುದೇ ಕುರುಹುಗಳು ಪೊಲೀಸರಿಗೆ ಸಿಕ್ಕಿರಲಿಲ್ಲ. ಕದ್ದ ಕಾರಿನಲ್ಲಿ ಜಿಪಿಎಸ್ ಅಳವಡಿಸಿದ್ದರಿಂದ ಆರೋಪಿ ಸೆರೆಯಾಗಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಈಟಿವಿ ಭಾರತ್ ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಕಣ್ಣಿಗೆ ಖಾರದಪುಡಿ ಎರಚಿ 6 ಲಕ್ಷ ದರೋಡೆ: ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ