ಮೈಸೂರು:ದೇಶದ ಉದ್ಯಮಿ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ರಾಜ್ಯ ಸರ್ಕಾರ 17ನೇ ಸ್ಥಾನಕ್ಕೆ ಕುಸಿದಿದ್ದು, ಕೋವಿಡ್ ಹಿನ್ನೆಲೆ ಉದ್ಯೋಗ ವಲಯವು ಸಂಕಷ್ಟಕ್ಕೀಡಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಉದ್ಯಮಿ ಸ್ನೇಹಿ ಪಟ್ಟಿಯಲ್ಲಿ 17 ಸ್ಥಾನಕ್ಕೆ ಕುಸಿದ ರಾಜ್ಯ: ಸಚಿವ ಎಸ್.ಟಿ. ಸೋಮಶೇಖರ್ ಕೊಟ್ಟ ಕಾರಣವೇನು? - ಸಚಿವ ಎಸ್.ಟಿ ಸೋಮಶೇಖರ್
ನಿನ್ನೆ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ 2018-19ನೇ ಸಾಲಿನ ಉದ್ಯಮ ಸ್ನೇಹಿ ರಾಜ್ಯಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕರ್ನಾಟಕ 17ನೇ ಸ್ಥಾನ ಪಡೆದಿದ್ದು, ಈ ಕುರಿತು ಸಚಿವ ಎಸ್.ಟಿ. ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸೋಮಶೇಖರ್, ಕೋವಿಡ್-19ನಿಂದ ಉದ್ಯೋಗ ವಲಯದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಸಂಕಷ್ಟ ಎದುರಾಗಿದೆ. ಆರ್ಥಿಕ ಚೇತರಿಕೆಗೆ ರಾಜ್ಯ ಸರ್ಕಾರ ಉತ್ತೇಜನ ನೀಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಉದ್ಯೋಗ ಸ್ನೇಹಿ ವಲಯವಾಗಲಿದೆ ಎಂದು ಹೇಳಿದರು.
ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ರಾಜಕಾರಣಿ ಮಕ್ಕಳು ಅಥವಾ ಯಾರೇ ಪಾಲ್ಗೊಂಡಿದ್ದರೂ ಕೂಡ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಡ್ರಗ್ ಮಾಫಿಯಾದಲ್ಲಿ ಯಾರೇ ಭಾಗಿಯಾಗಿದ್ದರೂ ಅವರು ಕಾನೂನಿನ ಮುಂದೆ ದೊಡ್ಡವರಲ್ಲ ಎಂದು ತಿಳಿಸಿದರು. ಹಂತ-ಹಂತವಾಗಿ ರೈತರಿಗೆ ಕೃಷಿ ಸಾಲ ನೀಡಲಾಗುತ್ತಿದೆ, 14 ಸಾವಿರ ಕೋಟಿಯಲ್ಲಿ 8 ಸಾವಿರ ಕೋಟಿ ನೀಡಲಾಗಿದೆ. ಅಲ್ಲದೇ ವಿಭಾಗದ ಮಟ್ಟದಲ್ಲಿ ಸಾಲ ನೀಡಲು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.