ಮೈಸೂರು: ಭಾರತದ ಡಿಜಿಟಲ್ ಉದ್ಯಮದ ವಹಿವಾಟು 2025ರ ವೇಳೆಗೆ 1 ಟ್ರಿಲಿಯನ್ ಆಗಬೇಕೆಂಬುದು ಪ್ರಧಾನಮಂತ್ರಿ ಅವರ ಗುರಿ. ಆ ವೇಳೆಗೆ ರಾಜ್ಯದ ಡಿಜಿಟಲ್ ಉದ್ಯಮದ ಪಾಲು 300-350 ಶತಕೋಟಿ ಡಾಲರ್ ತಲುಪಬೇಕೆಂಬ ಗುರಿ ಹಾಕಿಕೊಳ್ಳಲಾಗಿದೆ ಎಂದು ಐಟಿ/ಬಿಟಿ ಸಚಿವರಾದ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಹೇಳಿದರು.
ಮೈಸೂರಿನ ಹೆಬ್ಬಾಳ ಕೈಗಾರಿಕ ಪ್ರದೇಶದ ಸಿಲ್ವರ್ ಸ್ಪಿರಿಟ್ ಟೆಕ್ನಾಲಜಿ ಪಾರ್ಕ್ ನಲ್ಲಿ ಸ್ಥಾಪಿಸಿರುವ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕತೆಗೆ ಯಾವುದೇ ಸವಾಲಿದ್ದರೂ ನಿಗದಿತ ಗುರಿಯನ್ನು ತಲುಪಲು ಸರಕಾರ ಎಲ್ಲ ಕ್ರಮಗಳನ್ನೂ ಕೈಗೊಂಡಿದೆ ಎಂದರು.
ಐಟಿ ರಫ್ತಿನಲ್ಲಿ ನಂಬರ್1 :ಸದ್ಯಕ್ಕೆ ರಾಜ್ಯವು ವಾರ್ಷಿಕ 54 ಶತಕೋಟಿ ಡಾಲರ್ ಮೌಲ್ಯದ ಐಟಿ ರಫ್ತು ವಹಿವಾಟು ನಡೆಸುತ್ತಿದೆ. ಇದು ದೇಶದಲ್ಲೇ ಅತಿ ಹೆಚ್ಚು. ಇದರ ಪ್ರಮಾಣವನ್ನೂ ಇನ್ನು ಕೆಲವೇ ವರ್ಷಗಳಲ್ಲಿ 150 ಶತಕೋಟಿ ಡಾಲರ್ಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಅದಲ್ಲದೆ, ಒಟ್ಟಾರೆ ಜಿಎಸ್ಡಿಪಿಗೆ ಐಟಿ ವಲಯದ ಪಾಲನ್ನು 30%ಗೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
ಇದಲ್ಲದೆ, ಬಿಯಾಂಡ್ ಬೆಂಗಳೂರು ಉಪಕ್ರಮದಡಿ 10 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಹಾಗೂ ರಾಜ್ಯದ ಎಲ್ಲ ಪ್ರದೇಶಗಳಲ್ಲೂ ನವೋದ್ಯಮಗಳ ಸ್ಥಾಪನೆಗೆ ಒತ್ತು ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಈ ಎಲ್ಲ ಗುರಿಗಳನ್ನು ಸಾಧಿಸಿಲು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್, ಬಿಯಾಂಡ್ ಬೆಂಗಳೂರು, ದೇಶದಲ್ಲೇ ಅತ್ಯುತ್ತಮವಾದ ನವೋದ್ಯಮ ನೀತಿ, ಎಂಜಿಯರಿಂಗ್ ಸಂಶೋಧನಾ ಮತ್ತು ಅಭಿವೃದ್ಧಿ ನೀತಿ ಇತ್ಯಾದಿಗಳಿಂದ ಸಾಧ್ಯವಾಗುತ್ತಿದೆ ಎಂದ ಅವರು. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೂಡ ದೇಶದಲ್ಲೇ ಮೊತ್ತ ಮೊದಲಿಗೆ ರಾಜ್ಯದಲ್ಲೇ ಜಾರಿ ಮಾಡಲಾಗುತ್ತಿದೆ ಎಂದರು.