ಮೈಸೂರು: ಕಬ್ಬಿನ ಗದ್ದೆಯಲ್ಲಿ ಸಿಕ್ಕ ಮೂರು ಚಿರತೆ ಮರಿಗಳನ್ನು ಅರಣ್ಯ ಇಲಾಖೆ 10 ದಿನಗಳ ಯಶಸ್ವಿ ಕಾರ್ಯಾಚರಣೆಯ ನಂತರ ಮರಳಿ ತಾಯಿಯ ಮಡಿಲಿಗೆ ಸೇರಿಸಿದೆ. ಈ ಬಗ್ಗೆ ಅರಣ್ಯ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಮೈಸೂರು ತಾಲೂಕಿನ ಆಯರಹಳ್ಳಿ ಗ್ರಾಮದ ಬಳಿ ಇರುವ ಕಬ್ಬಿನ ಗದ್ದೆಯೊಂದರಲ್ಲಿ ಮೂರು ಚಿರತೆ ಮರಿಗಳು ಕಾಣಿಸಿಕೊಂಡಿದ್ದವು. ಖಾಸಗಿ ಜಮೀನೊಂದರಲ್ಲಿ ಕಾಣಿಸಿಕೊಂಡಿದ್ದ ಆ ಮೂರು ಚಿರತೆ ಮರಿಗಳನ್ನು ರಕ್ಷಿಸಿ, ಪುನಃ ತಾಯಿಯ ಮಡಿಲಿಗೆ ಸೇರಿಸಿದ ಮೈಸೂರು ಪ್ರಾದೇಶಿಕ ವಿಭಾಗದ ಅರಣ್ಯ ಇಲಾಖೆಯ ಮತ್ತು ಮೃಗಾಲಯ ಹಾಗೂ ಮೈಸೂರು ವನ್ಯಜೀವಿ ವಿಭಾಗದ ಸಿಬ್ಬಂದಿ ರೋಚಕ ಕಾರ್ಯಾಚರಣೆಯ ಹಿನ್ನೋಟ ಇಲ್ಲಿದೆ.
ಆಯರಹಳ್ಳಿ ಬಳಿಯ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಗ್ರಾಮಸ್ಥರಿಗೆ ದೊರೆತ ಮಾಹಿತಿಯಂತೆ ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಹೋಗಿ, ಮೂರು ಚಿರತೆ ಮರಿಗಳನ್ನು ವಶಕ್ಕೆ ಪಡೆದಿದ್ದರು. ಅದೇ ಸ್ಥಳದಲ್ಲಿ ಪ್ರತ್ಯೇಕವಾದ ಪೆಟ್ಟಿಗೆಯಲ್ಲಿ ಆ ಮರಿಗಳನ್ನು ಇರಿಸಿ, ತಾಯಿ ಚಿರತೆ ಬಂದು ಮರಿಗಳನ್ನು ತೆಗೆದುಕೊಂಡು ಹೋಗುವಂತೆ ಮಾಡಲಾಗಿತ್ತು. ಸ್ಥಳದಲ್ಲಿ ಕ್ಯಾಮರಾ ಸಹ ಅಳವಡಿಸಲಾಗಿತ್ತು.
ಆದರೆ ತಾಯಿ ಚಿರತೆ ಬಾರದ ಕಾರಣದಿಂದ ಎರಡನೇ ದಿನದಂದು ಸಂಜೆ 5 ಗಂಟೆಯ ವೇಳೆಗೆ ಮರಿಗಳು ದೊರೆತ ಸ್ಥಳದಲ್ಲಿ ಟ್ರಾಪ್ ಕೇಜ್ ಅಳವಡಿಸಲಾಗಿತ್ತು. ಸರಿಸುಮಾರು 6 ಗಂಟೆ ವೇಳೆಗೆ ತಾಯಿ ಚಿರತೆ ಬೋನಿಗೆ ಬಿದ್ದಾಗ ಮೇಲಧಿಕಾರಿಗಳ ಸೂಚನೆಯಂತೆ ತಾಯಿ ಮತ್ತು ಮರಿ ಚಿರತೆಗಳನ್ನು ಚಾಮುಂಡಿ ಪುನರ್ವಸತಿ ಕೇಂದ್ರಕ್ಕೆ ಸಾಗಿಸಲಾಗಿತ್ತು. ಕೂಡಲೇ ನುರಿತ ವೈದ್ಯರ ತಂಡ ಮರಿ ಮತ್ತು ತಾಯಿ ಚಿರತೆಗಳನ್ನು ಬೇರ್ಪಡಿಸಿ, ಸಿಸಿಟಿವಿ ಅಳವಡಿಸಿ ನಿಗಾವಹಿಸಲಾಗಿತ್ತು. ಮೂರನೇ ಮತ್ತು ನಾಲ್ಕನೇ ದಿನ ಮುಂದಿನ 48 ಗಂಟೆಗಳ ಕಾಲ ಹೆಣ್ಣು ಚಿರತೆ ಹಾಗೂ ಮರಿಗಳು ಪರಸ್ಪರ ಹೊಂದಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.