ಮೈಸೂರು: ಕೊರೊನಾ ವೈರಸ್ ತಡೆಗಟ್ಟಲು ಒಂದು ತಿಂಗಳಿನಿಂದ ದೇಶಾದ್ಯಂತ ಲಾಕ್ಡೌನ್ ಘೋಷಣೆಯಾಗಿದೆ. ಇದರಿಂದ ಕೆಲ ಶಾಸಕರು ತಮ್ಮ ಕ್ಷೇತ್ರ ಬಿಟ್ಟು ಕದಲುತ್ತಿಲ್ಲ. ಆದರೆ, ಮೈಸೂರಿನ ಶಾಸಕರೊಬ್ಬರು ತಮ್ಮ ಕ್ಷೇತ್ರದತ್ತ ಎರಡು ತಿಂಗಳಿನಿಂದ ತಲೆ ಹಾಕಿಲ್ಲ.
ಹೌದು, ಫೆ.24 ರಂದು ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ ಎನ್.ಆರ್. ಕ್ಷೇತ್ರ ಶಾಸಕ ತನ್ವೀರ್ ಸೇಠ್, ತಮ್ಮ ಕ್ಷೇತ್ರ ಅಭಿವೃದ್ಧಿ ಬಗ್ಗೆ ಅಧಿಕಾರಿಗಳೊಂದಿಗೆ ಅಂದು ಸಭೆ ನಡೆಸಿ ವಾಪಸ್ ಬೆಂಗಳೂರಿಗೆ ತೆರಳಿದವರು ಇತ್ತ ಸುಳಿದಿಲ್ಲ. ಆಹಾರ ಕಿಟ್, ಸರ್ಕಾರದಿಂದ ಸಿಗುವ ಪಡಿತರಕ್ಕಾಗಿ ಇಲ್ಲಿನ ಜನರ ಬವಣೆ ತಪ್ಪುತ್ತಿಲ್ಲ. ಈ ಕ್ಷೇತ್ರದಲ್ಲಿ ಶೇ. 40ರಷ್ಟು ಸ್ಲಂ ನಿವಾಸಿಗಳೇ ವಾಸವಾಗಿದ್ದು, ಮೊದಲೇ ಬಡತನ ಹೊದ್ದು ಮಲಗಿರುವ ಹೊತ್ತಲ್ಲೇ ಕೊರೊನಾ ಭಯದೊಂದಿಗೆ ಹಸಿವಿನ ಚಿಂತೆ ಹೆಚ್ಚಾಗುವಂತೆ ಮಾಡಿದೆ.