ಮೈಸೂರು:ಶಾಲೆಗೆ ಮಕ್ಕಳು ಚಕ್ಕರ್ ಹೊಡೆಯುವುದು ಸಹಜ, ಆದರೆ ಈ ಶಾಲೆಯಲ್ಲಿ ಶಿಕ್ಷಕರೇ ಚಕ್ಕರ್ ಹೊಡೆಯುತ್ತಾರೆ, ಮಕ್ಕಳು ಶಿಕ್ಷಕರಿಗಾಗಿ ಕಾಯುತ್ತಾರೆ. ಈ ಶಾಲೆ ಯಾವುದು ಎನ್ನುವ ಕುತೂಹಲವೇ ಹಾಗಾದರೆ ಈ ಸ್ಟೋರಿ ನೋಡಿ.
ಮಕ್ಕಳು 10 ಗಂಟೆಗೆ ಬಂದ್ರೆ ಶಿಕ್ಷಕರು ಬರೋದು 12ಕ್ಕೆ... ನೋಡಿ ಸ್ವಾಮಿ ಇದು ಗಿರಿಜನ ಶಾಲೆಯ ಸ್ಥಿತಿ - kannadanews
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಾಡಂಚಿನ ವೆಂಕಟಗಿರಿ ಕಾಲೊನಿಯ ಗಿರಿಜನ ಶಾಲೆಗೆ ಶಿಕ್ಷಕರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಾಡಂಚಿನ ವೆಂಕಟಗಿರಿ ಕಾಲೊನಿಯ ಶಾಲೆಯಲ್ಲಿ ಸುಮಾರು 42 ಗಿರಿಜನರ ಮಕ್ಕಳು ವ್ಯಾಸಂಗ ಮಾಡುತ್ತಾರೆ. ಈ ಗಿರಿಜನ ಕಾಲೊನಿಯ ಶಾಲೆಯಲ್ಲಿ 4 ಜನ ಶಿಕ್ಷಕರು ಹಾಗೂ ಒಬ್ಬರು ಮುಖ್ಯೋಪಾಧ್ಯಾಯ ಕೂಡಾ ಇದ್ದಾರೆ. ಈ ಶಾಲೆ ಗಿರಿಜನ ಸರ್ಕಾರಿ ಆಶ್ರಮ ಶಾಲೆಯಾಗಿದ್ದು, ಈ ಶಾಲೆಗೆ ಮೇಲ್ವಿಚಾರಕರು ಹಾಗೂ ಒಬ್ಬ ವಾರ್ಡನ್ ಸಹ ಇದ್ದಾರೆ. ಈ ಗಿರಿಜನ ಆಶ್ರಮ ಶಾಲೆಗೆ 42 ಮಕ್ಕಳು 10 ಗಂಟೆಗೆ ಕರೆಕ್ಟಾಗಿ ಹಾಜರಾಗ್ತಾರೆ. ಆದರೆ, ಮಕ್ಕಳಿಗೆ ಶಿಕ್ಷಣ ಹಾಗೂ ಶಿಸ್ತು ಕಲಿಸಬೇಕಾದ ಶಿಕ್ಷಕರು ಮಾತ್ರ ಇಲ್ಲಿ ಬರೋದು 12 ಗಂಟೆಗೆ. ಶಾಲೆಯ ಬೀಗವನ್ನು ಮಕ್ಕಳೇ ತೆಗೆದು ಕಸ ಗುಡಿಸಿ, ಶಿಕ್ಷಕರಿಗಾಗಿ ದಾರಿ ಕಾಯ್ತಾರೆ. ಇದು ಇಲ್ಲಿನ ಮಕ್ಕಳ ನಿತ್ಯದ ಕಾಯಕ. ಮಕ್ಕಳಗಿಂತ ಮೊದಲು ಬಂದು, ಲೇಟಾಗಿ ಬಂದ ಮಕ್ಕಳಿಗೆ ತಿದ್ದಿ ಬುದ್ದಿ ಹೇಳಬೇಕಾದ ನಾಲ್ವರು ಶಿಕ್ಷಕರು ಮಾತ್ರ ಪ್ರತಿ ದಿನ 12 ಗಂಟೆಗೆ ಬರುತ್ತಾರೆ, ಮಧ್ಯಾಹ್ನ 3 ಗಂಟೆಗೆ ಹೊರಟು ಹೋಗುತ್ತಾರೆ.
ಶಿಕ್ಷಕರ ನಡುವಿನ ಹೊಂದಾಣಿಕೆಯಿಂದ ದಿನದಲ್ಲಿ ಇಬ್ಬರು ಶಿಕ್ಷಕರು ಗೈರಾಗುತ್ತಾರೆ. ಈ ಬಗ್ಗೆ ಪ್ರಶ್ನೆ ಮಾಡಲು ಯಾವುದೇ ಮೇಲಧಿಕಾರಿಗಳು ಈ ಗಡಿ ಭಾಗದ ಶಾಲೆಗೆ ಬರುವುದಿಲ್ಲ. ಇದರಿಂದ ಶಿಕ್ಷಕರು ತಮಗೆ ಇಷ್ಟಬಂದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಒಟ್ಟಿನಲ್ಲಿ ಮಕ್ಕಳಿಗೆ ವಿದ್ಯೆ ಜೊತೆಗೆ ಸಮಯಪ್ರಜ್ಞೆ, ಶಿಸ್ತುಗಳನ್ನು ಕಲಿಸಿಕೊಡಬೇಕಾದ ಶಿಕ್ಷಕರೇ ಈ ರೀತಿ ಸಮಯಕ್ಕೆ ಸರಿಯಾಗಿ ಶಾಲೆಗೆ ಬರದಿದ್ದರೆ ಇವರಿಂದ ಪಾಠ ಕಲಿಯುವ ಮಕ್ಕಳ ಭವಿಷ್ಯ ಏನಾಗಬಹುದು ಎಂಬ ಚಿಂತೆ ಕಾಡದಿರದು.