ಮೈಸೂರು: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರು ಆಡುವ ಮಾತಿಗೆ ತೂಕ ಇರುತ್ತಿತ್ತು. ಆದರೆ ಕೋವಿಡ್ ನಂತರ ಸಿದ್ದರಾಮಯ್ಯ ಅವರು ಬರೀ ವಿವಾದದ ಮಾತುಗಳನ್ನೇ ಆಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಹಾತ್ಮ ಗಾಂಧಿ ಹತ್ಯೆ ವಿಚಾರವೇ ಬೇರೆ-ಮೊಟ್ಟೆ ಎಸೆದ ಪ್ರಕರಣವೇ ಬೇರೆ. ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿದ ಸಿದ್ದರಾಮಯ್ಯ, ಕೊಡಗು ಪ್ರವಾಹದಿಂದ ತತ್ತರಿಸಿದಾಗ ಅವರು ಅಲ್ಲಿಗೆ ಹೋಗದೆ ಇರೋ ಕಾರಣಕ್ಕೆ ಜನರಿಗೆ ಆಕ್ರೋಶವಿದೆ ಎಂದರು.
ಸಿದ್ದರಾಮಯ್ಯ ಕೊಡಗಿನ ಪ್ರವಾಹದ ಸಂದರ್ಭ ಅಲ್ಲಿ ಹೋಗಿ ಜನರ ಕಷ್ಟ ಆಲಿಸಿದ್ದರೆ ಜನ ಅವರ ಮೇಲೆ ಮೊಟ್ಟೆ ಎಸೆಯುತ್ತಿರಲಿಲ್ಲ. ಈ ಮಧ್ಯೆ ಜನ ಮಳೆಯಿಂದ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರಿಂದ ಜನರಲ್ಲಿ ಆಕ್ರೋಶವಿದೆ. ಆದ್ದರಿಂದ ಮೊಟ್ಟೆ ಎಸೆದಿದ್ದಾರೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಒಂದು ಗೌರವ ಇದೆ. ಆ ಗೌರವದ ರೀತಿಯಲ್ಲಿ ಕೆಲಸ ಮಾಡಬೇಕು. ಸಿದ್ದರಾಮಯ್ಯ ಅವರನ್ನು ಹತ್ಯೆ ಮಾಡುವಂತಹ ವಾತಾವರಣ ಹಾಗೂ ಜೀವ ಬೆದರಿಕೆ ಹಾಕುವಂತಹ ಕಾಲ ಕರ್ನಾಟಕದಲ್ಲಿ ಇನ್ನೂ ಬಂದಿಲ್ಲ. ಅವರಿಗೆ ಅಭದ್ರತೆ ಬೇಡ, ಆರಾಮಾಗಿ ಕೆಲಸ ಮಾಡಲಿ. ಪೊಲೀಸರು ಭದ್ರತೆ ಕೊಡುತ್ತಾರೆ ಎಂದು ಇದೇ ಸಂದರ್ಭದಲ್ಲಿ ಸಚಿವ ಸೋಮಶೇಖರ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ಇದನ್ನೂ ಓದಿ:ಮಹಾತ್ಮ ಗಾಂಧಿ ಕೊಂದವರು ನನ್ನನ್ನು ಬಿಡುತ್ತಾರಾ.. ಸಿದ್ದರಾಮಯ್ಯ ಪ್ರಶ್ನೆ