ಮೈಸೂರು: ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಹೋಬಳಿಯ ಕಾರ್ಯ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ದೀಪಾವಳಿ ಹಬ್ಬದ ಮಾರನೇ ದಿನ ನಡೆಯುವ ಕಾರ್ಯ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಸುಮಾರು ಮೂರು ದಿನಗಳ ಕಾಲ ನಡೆಯುತ್ತದೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆಯನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ಆದರೆ, ಈ ಬಾರಿ ಅದ್ಧೂರಿಯಾಗಿ ಆಚರಣೆ ಮಾಡಿದ್ದು, ಬೆಳಗ್ಗೆಯಿಂದಲೇ ರಥೋತ್ಸವಕ್ಕೆ ಹೂವಿನ ಅಲಂಕಾರದಿಂದ ಶೃಂಗಾರ ಮಾಡಲಾಗಿತ್ತು. ಗ್ರಾಮಸ್ಥರು ಪೂಜೆ ಪುನಸ್ಕಾರ ಮಾಡಿ ಇಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಭಕ್ತ ಸಾಗರದ ನಡುವೆ ಶ್ರೀ ಸಿದ್ದೇಶ್ವರ ಸ್ವಾಮಿ ಅದ್ಧೂರಿ ರಥೋತ್ಸವ ರಥೋತ್ಸವ ಎಳೆದುಕೊಂಡು ಬಂದು ಗ್ರಾಮ ಪಂಚಾಯತ್ ಆವರಣದಲ್ಲಿ ಚಕ್ರದಿಂದ ಬೇರ್ಪಡಿಸಲಾಯಿತು. ಸುಮಾರು 20 ಅಡಿ ಎತ್ತರದ 500 ಕೆಜಿ ತೂಕದ ರಥೋತ್ಸವವನ್ನ ಹೆಗಲ ಮೇಲೆ ಹೊತ್ತುಕೊಂಡು ಎರಡು ಕಿಲೋಮೀಟರ್ ದೂರದಲ್ಲಿರುವ ಸಿದ್ದೇಶ್ವರ ಸ್ವಾಮಿ ಬೆಟ್ಟಕ್ಕೆ ಕೊಂಡೊಯ್ಯಲಾಯಿತು.
ಇದನ್ನೂ ಓದಿ:ಬೀರಸಿದ್ದೇಶ್ವರ, ಪರಮಾನಂದ ದೇವರ ಜಾತ್ರಾ ಮಹೋತ್ಸವ: ಭಂಡಾರ ಎರಚಿ ಭಕ್ತಿಯ ಪರಾಕಾಷ್ಠೆ
ರಥ ಹೊತ್ತುಕೊಂಡು ಬೆಟ್ಟ ಹತ್ತುವ ವೇಳೆ ನವದಂಪತಿಗಳು ಹಣ್ಣು ಎಸೆದು ಪುನೀತರಾದರು. ಈ ವೇಳೆ ಲಕ್ಷಾಂತರ ಭಕ್ತರು ಉಘೇ ಉಘೇ ಸಿದ್ದೇಶ್ವರ ಎಂದು ಘೋಷಣೆ ಕೂಗಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಒದಗಿಸಿದರು.