ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲು ಅಪಾರ ಭಕ್ತ ಸಾಗರವೇ ಆಗಮಿಸಿ, ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಚಾಮುಂಡೇಶ್ವರಿ ತಾಯಿಯ ಮೂಲ ಮೂರ್ತಿ ಹಾಗೂ ಉತ್ಸವ ಮೂರ್ತಿ ಜೊತೆಗೆ ಇಡೀ ದೇವಸ್ಥಾನವನ್ನೇ ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿದೆ.
ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಆಷಾಢ ಮಾಸದ ಶುಕ್ರವಾರ ಪೂಜೆ ಸಲ್ಲಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆಯಿಂದ, ಮೊದಲ ಆಷಾಡ ಶುಕ್ರವಾರ ಇಂದು ಬೆಳಗಿನ ಜಾವ 5 ಗಂಟೆಯಿಂದಲೇ ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡಲಾಗಿದೆ. ದರ್ಶನಕ್ಕೂ ಮುನ್ನ ಚಾಮುಂಡೇಶ್ವರಿ ತಾಯಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿ, ನಂತರ ಅಲಂಕಾರ ಮಾಡಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನ ಜಾವದಿಂದ ರಾತ್ರಿ 9:30 ಗಂಟೆವರೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಖಾಸಗಿ ವಾಹನಗಳಿಗೆ ನಿಷೇಧ ಹೇರಲಾಗಿದೆ.
ನಗರದ ಲಲಿತ್ ಮಹಲ್ ಮೈದಾನದಿಂದ 40 ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ತಮ್ಮ ವಾಹನಗಳನ್ನು ಲಲಿತ್ ಮಹಲ್ ಮೈದಾನದ ಬಳಿ ನಿಲ್ಲಿಸಿ, ಅಲ್ಲಿಂದ ನೇರವಾಗಿ ಉಚಿತ ಬಸ್ಗಳಲ್ಲಿ ದೇವಾಲಯಕ್ಕೆ ತೆರಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ ವಿ.ರಾಜೇಂದ್ರ ಮಾಹಿತಿ ನೀಡಿದ್ದಾರೆ.
ಲಕ್ಷಗಟ್ಟಲೇ ಭಕ್ತರು ಮೊದಲ ಆಷಾಢ ಶುಕ್ರವಾರ ದೇವಿಯ ದರ್ಶನಕ್ಕೆ ಬರುವ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಭದ್ರತೆ ಮಾಡಿಕೊಂಡಿದ್ದು, 1200 ಸಿಎಆರ್ ಪೊಲೀಸರು, ಅಶ್ವ ದಳ ಹಾಗೂ ಡಿಸಿಪಿ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ. ದೇವಾಲಯದ ಒಳಗೆ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡುವ ಭಕ್ತರು ಆಹಾರ ಸುರಕ್ಷತಾ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಲು ಸೂಚನೆ ನೀಡಲಾಗಿದೆ.
ಪ್ಲಾಸ್ಟಿಕ್ ಮುಕ್ತ ಆಚರಣೆ : ಈ ಬಾರಿಯ ಆಷಾಢ ಮಾಸದ ಶುಕ್ರವಾರಕ್ಕೆ ಲಕ್ಷಾಂತರ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಕಾರಣ, ಎಲ್ಲೆಂದರಲ್ಲಿ ಪ್ಲಾಸ್ಟಿಕನ್ನು ಬಳಸಿ ಬೀಸಾಡುತ್ತಾರೆ. ಇದನ್ನು ತಡೆಯಲು ಈ ಬಾರಿ ಪ್ಲಾಸ್ಟಿಕ್ ಮುಕ್ತ ಆಷಾಢ ಮಾಸ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದರು. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಡಿದರೆ ದಂಡ ವಿಧಿಸಲಾಗುವುದು. ಇದಕ್ಕಾಗಿ ಅಲ್ಲಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.
ದೇವಸ್ಥಾನದ ಪ್ರಧಾನ ಅರ್ಚಕರು ಹೇಳುವುದೇನು : ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಮಾಧ್ಯಮಗಳ ಜೊತೆ ಮಾತನಾಡಿ, ಇಂದು ಮೊದಲ ಆಷಾಢ ಶುಕ್ರವಾರ. ಈ ದಿನ ಚಾಮುಂಡೇಶ್ವರಿ ತಾಯಿಗೆ ಲಕ್ಷ್ಮಿ ಅಲಂಕಾರ ಮಾಡಲಾಗಿದ್ದು, ಬೆಳಗ್ಗೆ 3:30 ರಿಂದಲೇ ದೇವಸ್ಥಾನದಲ್ಲಿ ಮಹಾ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಮಹಾಮಂಗಳಾರತಿ ಮಾಡಲಾಗಿದೆ. ಬೆಳಗ್ಗೆ 5:30 ರಿಂದ ರಾತ್ರಿ 9:30 ರವರೆಗೆ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು. ಇದಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದಾರೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್, ಮಾಧ್ಯಮಗಳಿಗೆ ಮೊದಲ ಆಷಾಡ ಶುಕ್ರವಾರದ ವಿಶೇಷತೆಗಳ ಬಗ್ಗೆ ವಿವರಿಸಿದರು.
ಮ್ಯಾಂಗೋ ಬರ್ಫಿ ವಿತರಣೆ:ಆಷಾಢಮಾಸದ ಪೂಜೆಗಾಗಿ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ವಿತರಿಸಲು, ಚಾಮುಂಡೇಶ್ವರಿ ಸೇವಾ ಸಮಿತಿ
25 ಸಾವಿರ ಮ್ಯಾಂಗೋ ಬರ್ಫಿಯ ತಯಾರು ಮಾಡಿಸಿದ್ದಾರೆ. ಕಳೆದ ಬಾರಿ ವಿಶೇಷ ಮೈಸೂರು ಪಾಕ್ ಪ್ರಸಾದ ವಿತರಣೆ ಮಾಡಿದ್ದ ಸಮಿತಿ, ಈ ಬಾರಿ
ಒಟ್ಟು 8 ಜನ ಬಾಣಸಿಗರಿಂದ ಮ್ಯಾಂಗೋ ಬರ್ಫಿಯನ್ನು ಸಿದ್ಧ ಮಾಡಿಸಿದೆ. ಈ ಮ್ಯಾಂಗೋ ಬರ್ಫಿಗೆ, 30 ಕೆಜಿ ಮೈದಾ, 200 ಕೆ ಜಿ ಆಲ್ಕೋವಾ
ಸಕ್ಕರೆ 400 ಕೆಜಿ, ಮಾವಿನಹಣ್ಣಿನ ಫಲ್ಪ್ 100 ಲೀಟರ್, ಬಾದಾಮಿ 5 ಕೆಜಿ, ನಂದಿನಿ ತುಪ್ಪ 2 ಟಿನ್, ಮಿಲ್ಕ್ ಪೌಡರ್ 30 ಕೆಜಿಯಷ್ಟು ಬಳಕೆ ಮಾಡಲಾಗಿದೆ. ಮೊದಲ ಆಷಾಢ ಶುಕ್ರವಾರವಾದ ಇಂದು ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಪ್ರಸಾದ ವಿತರಣೆ ಮಾಡಲಾಗುತ್ತಿದೆ.
ಇದನ್ನೂ ಓದಿ:ಮೊದಲ ಆಷಾಢ ಶುಕ್ರವಾರ: ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ವಿತರಿಸಲು ಸಿದ್ದವಾಗುತ್ತಿವೆ ಮ್ಯಾಂಗೋ ಬರ್ಫಿ