ಕರ್ನಾಟಕ

karnataka

ಮೋದಿ ಅವರು ರಾಜ್ಯಕ್ಕೆ ಬರಲು ಚುನಾವಣಾ ಆಯೋಗ ಅನುಮತಿ ನೀಡಿದೆಯಾ : ಸಿದ್ದರಾಮಯ್ಯ ಪ್ರಶ್ನೆ

By

Published : Apr 2, 2023, 3:26 PM IST

ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯಕ್ಕೆ ಬರಲು ಚುನಾವಣಾ ಆಯೋಗ ಆನುಮತಿ ನೀಡಿದೆಯೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Siddaramaiah
ಮೋದಿ ಅವರು ಬರಲು ಚುನಾವಣಾ ಆಯೋಗ ಅನುಮತಿ ನೀಡಿದ್ಯಾ: ಸಿದ್ದರಾಮಯ್ಯ

ಮೈಸೂರು : ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬರಲು ಚುನಾವಣಾ ಆಯೋಗ ಅನುಮತಿ ನೀಡಿದೆಯಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿ ಎಪ್ರಿಲ್​​ 9 ರಂದು ರಾಜ್ಯಕ್ಕೆ ಪ್ರಧಾನಿ‌ ಮೋದಿ ಆಗಮಿಸುವ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಘೋಷಣೆಯಾದ ಮೇಲೆ ಸರ್ಕಾರಿ ಕಾರ್ಯಕ್ರಮಗಳನ್ನು ಮಾಡಬಾರದು. ಚುನಾವಣಾ ನೀತಿ ಸಂಹಿತೆ ಎಲ್ಲರಿಗೂ ಒಂದೇ. ನೀತಿ ಸಂಹಿತೆ ಶಾಸಕರಿಗೂ ಒಂದೇ ಆಗಿರುತ್ತದೆ ಮತ್ತು ಪ್ರಧಾನಿಗೂ ಒಂದೇ ಆಗಿರುತ್ತದೆ. ಪ್ರಧಾನಿ ಮೋದಿಯವರಿಗೆ ರಾಜ್ಯಕ್ಕೆ ಆಗಮಿಸಲು ಚುನಾವಣಾ ಆಯೋಗ ಅನುಮತಿ‌ ನೀಡಿದೆಯೇ ಎಂದು ಅವರು ಕೇಳಿದರು.

ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೇಗೆ ಸಾಧ್ಯ. ಈ ಕಾರ್ಯಕ್ರಮಕ್ಕೆ ಅನುಮತಿ ಸಿಕ್ಕಿದೆಯೇ ಎಂದು ನೋಡಬೇಕು. ನೀತಿ ಸಂಹಿತೆ, ನಿಯಮ ಎಲ್ಲರಿಗೂ ಒಂದೇ ಎಂದು ಸಿದ್ದರಾಮಯ್ಯ ಹೇಳಿದರು.

ನಿಯಮ ಮೀರಿ ಶೇ. 6ರಷ್ಟು ಮೀಸಲಾತಿ- ಸಿದ್ದರಾಮಯ್ಯ.. ಮೀಸಲಾತಿ ಪರಿಷ್ಕರಣೆಯಿಂದ ಬಿಜೆಪಿಗೆ ಅನುಕೂಲ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಇದು ಯಾವುದೇ ಪೂರ್ವತಯಾರಿ ಇಲ್ಲದೆ ಚುನಾವಣೆಗಾಗಿ ತಂದಿರುವ ವಿಷಯವಾಗಿದೆ. ನಿಯಮ ಮೀರಿ ಶೇ.6 ರಷ್ಟು‌ ಹೆಚ್ಚಳ ಮಾಡಲಾಗಿದೆ. ಇದಕ್ಕೆ ಸಂವಿಧಾನದ ತಿದ್ದುಪಡಿ ಆಗಬೇಕಿತ್ತು. ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಯಬೇಕಿತ್ತು. ಇದ್ಯಾವುದನ್ನೂ ಇವರು ಮಾಡಿಯೇ ಇಲ್ಲ. ಈ ಕಾರಣದಿಂದ ಇದು ಕೋರ್ಟ್​ನಲ್ಲಿ ನಿಲ್ಲುವುದಿಲ್ಲ ಎಂದು ಹೇಳಿದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾಗಮೋಹನ್ ದಾಸ್ ವರದಿ ರಚನೆ ಮಾಡಲಾಗಿದೆ. 2017 ರಲ್ಲಿ ಇದರ ವರದಿ ಬಂದಿದೆ. ನಾಲ್ಕು ವರ್ಷ ಇದನ್ನು ಜಾರಿ ಮಾಡದೆ ಏನು ಮಾಡುತ್ತಿದ್ದರು? ಮೀಸಲಾತಿ ಹೆಚ್ಚಳ ರಾಜ್ಯ ಸರ್ಕಾರದ ಚುನಾವಣೆಯ ಗಿಮಿಕ್ ಎಂದು ಟೀಕೆ ಮಾಡಿದರು.

ಜೇನುಗೂಡಿಗೆ ಕೈ ಹಾಕಿ‌ ಜನರಿಗೆ ಸಿಹಿ ಹಂಚಿದ್ದೇನೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೀಸಲಾತಿ ಪರಿಷ್ಕರಣೆ ಮಾಡಿದ್ದು ಇದೇ ಮೊದಲಲ್ಲ. 2ಎ, 2ಬಿ, 3ಎ, 3ಬಿ ಗಳನ್ನು ಇದಕ್ಕೂ ಮೊದಲೇ ಮಾಡಲಾಗಿದೆ. 1994 ರಿಂದ 2B ಮೀಸಲಾತಿ ಇತ್ತು. ಅದನ್ನು 2023ರಲ್ಲಿ ಏಕೆ ತೆಗೆಯಲಾಯಿತು ಎಂದರು.

ಕಾಂಗ್ರೆಸ್​ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಚಾಮರಾಜ, ಚಾಮುಂಡೇಶ್ವರಿ ಟಿಕೆಟ್ ವಿಚಾರ ನಾಡಿದ್ದು ಇತ್ಯರ್ಥವಾಗಲಿದೆ. ನಾಡಿದ್ದು ಮೀಟಿಂಗ್ ಬಳಿಕ ಕಾಂಗ್ರೆಸ್​ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗಲಿದೆ. ಇನ್ನು, ನಾನು ಕೋಲಾರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ಹೈಕಮಾಂಡ್​ ತೀರ್ಮಾನವೇ ಅಂತಿಮ ಎಂದು ಹೇಳಿದರು.

ವರುಣಾದಲ್ಲಿ ಸ್ಪರ್ಧೆ ವಿಚಾರವಾಗಿ ಮಾತನಾಡಿ, ವರುಣಾದಲ್ಲಿ ಯಾರು, ಯಾರನ್ನೂ ಕಟ್ಟಿಹಾಕಲು‌ ಸಾಧ್ಯವಿಲ್ಲ. ಸೋಲಿಸುವುದು, ಗೆಲ್ಲಿಸುವುದು ಎಲ್ಲಾ ಜನರ ಕೈಯಲ್ಲಿದೆ. ನಾನು ವರುಣಾಕ್ಕೆ ಪ್ರಚಾರಕ್ಕೆ ಈಗಲೂ ಹೋಗುವುದಿಲ್ಲ. ನಾಮಪತ್ರ ಸಲ್ಲಿಕೆಗೆ ಮಾತ್ರ ಹೋಗುತ್ತೇನೆ. ಎಲ್ಲವನ್ನೂ ನನ್ನ ಮಗ ಶಾಸಕ ಯತೀಂದ್ರ ನೋಡಿಕೊಳ್ಳುತ್ತಾನೆ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ :'ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೆ ಕೇಂದ್ರದಿಂದ ರಾಜ್ಯದ ಜನರಿಗೆ ಅನ್ಯಾಯ'

ABOUT THE AUTHOR

...view details