ಕೃಷ್ಣ ರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ. ಸೋಮಶೇಖರ್ ಮೈಸೂರು:ನಗರದ ಪ್ರತಿಷ್ಠಿತ ಕೃಷ್ಣ ರಾಜ ಹಾಗೂ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಆಪ್ತರಾದ ಎಂ.ಕೆ. ಸೋಮಶೇಖರ್ ಹಾಗೂ ಹರೀಶ್ ಗೌಡ ಅವರಿಗೆ ಕಾಂಗ್ರೆಸ್ 3ನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗಿದೆ. ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ಟಿಕೆಟ್ ಕೈತಪ್ಪಿದ್ದು ನಾಳೆ ಮಹತ್ವದ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ.
ಚಾಮರಾಜ ಕ್ಷೇತ್ರಕ್ಕೆ ಹರೀಶ್ ಗೌಡ ಕಾಂಗ್ರೆಸ್ ಅಭ್ಯರ್ಥಿ:ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಹರೀಶ್ ಗೌಡ, ಸಿದ್ದರಾಮಯ್ಯ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಅವರಿಗೆ ಈ ಬಾರಿ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ 3ನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಆಗಿದೆ.
ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಹರೀಶ್ ಗೌಡ, ಕಾಂಗ್ರೆಸ್ ಟಿಕೆಟ್ ನೀಡಿದ ಎಲ್ಲಾ ಮುಖಂಡರಿಗೂ ಧನ್ಯವಾದ ಅರ್ಪಿಸಿದರು. ಈ ಬಾರಿ ಕಾಂಗ್ರೆಸ್ ಚಾಮರಾಜ ಕ್ಷೇತ್ರದಲ್ಲಿ ಗೆಲ್ಲಲಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ವಾಸು ಅವರ ಬೆಂಬಲ ಪಡೆಯುತ್ತೇನೆ ಎಂದು ತಿಳಿಸಿದರು. 19ನೇ ತಾರೀಖು ನಾಮಪತ್ರ ಸಲ್ಲಿಸುವ ಬಗ್ಗೆ ಪಕ್ಷದ ಮುಖಂಡರ ಜೊತೆ ಚರ್ಚಿಸಿ ತಿರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಕೃಷ್ಣ ರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಕೆ. ಸೋಮಶೇಖರ್:ಮೈಸೂರು ನಗರದ ಕೃಷ್ಣ ರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಮಾಜಿ ಶಾಸಕ, ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಎಂ. ಕೆ. ಸೋಮಶೇಖರ್ಗೆ ಟಿಕೆಟ್ ಸಿಕ್ಕಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನನಗೆ ಟಿಕೆಟ್ ಘೋಷಣೆ ಮಾಡಲು ಕಾರಣರಾದ ಎಲ್ಲಾ ನಾಯಕರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಕ್ಷೇತ್ರದಲ್ಲಿ ಎಲ್ಲಾ ಟಿಕೆಟ್ ಆಕಾಂಕ್ಷಿಗಳನ್ನ ಒಟ್ಟಾಗಿ ತೆಗೆದುಕೊಂಡು ಹೋಗುವುದಾಗಿ ತಿಳಿಸಿದರು.
ಕಳೆದ 20 ವರ್ಷಗಳಿಂದ ಜನ ಸೇವೆ ಮಾಡಿಕೊಂಡು ಬರುತ್ತಿದ್ದೇನೆ, ಇದನ್ನು ಗುರುರಿಸಿ ಪಕ್ಷ ನನಗೆ ಅವಕಾಶ ಕೊಟ್ಟಿದೆ. ಇದರ ಆಧಾರ ಮೇಲೆ ನಾನು ಮತಯಾಚನೆ ಮಾಡುತ್ತೇನೆ. ಬಿಜೆಪಿಯಿಂದ ಯಾರಾದರೂ ಅಭ್ಯರ್ಥಿಯಾಗಲಿ, ನಾನು ಹಿಂದೆ ಶಾಸಕನಾಗಿದ್ದಾಗ ಮತ್ತು ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ದಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸುತ್ತೇನೆ. ಹಾಲಿ ಶಾಸಕರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಕೆಲಸವನ್ನು ಮಾಡಿಲ್ಲ ಎಂದರು.
ಮಾಜಿ ಶಾಸಕ ವಾಸು ನಾಳೆ ಮಹತ್ವದ ಮಾಧ್ಯಮಗೋಷ್ಟಿ:ಮೊದಲ ಪಟ್ಟಿಯಲ್ಲಿಯೇ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ವೀರಪ್ಪ ಮೊಯ್ಲಿ ಅವರ ಆಪ್ತ ಮಾಜಿ ಶಾಸಕ ವಾಸು ಅವರಿಗೆ ಕೊನೆ ಘಳಿಗೆಯಲ್ಲಿ ಟಿಕೆಟ್ ಕೈ ತಪ್ಪಿದೆ. ಇದರಿಂದ ನಿರಾಶರಾಗಿರುವ ವಾಸು ಇಂದೇ ತಮ್ಮ ಮುಂದಿನ ನಡೆ ಬಗ್ಗೆ ಚರ್ಚಿಸಲು ಬೆಂಬಲಿಗರ ಸಭೆ ಕರೆದಿದ್ದಾರೆ. ನಾಳೆ ಬೆಳಗ್ಗೆ ಖಾಸಗಿ ಹೋಟೆಲ್ನಲ್ಲಿ ಮಹತ್ವದ ಮಾಧ್ಯಮಗೋಷ್ಟಿ ನಡೆಸಿ ತಮ್ಮ ನಡೆಯ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ಜಗದೀಶ್ ಶೆಟ್ಟರ್ ಕಾಂಗ್ರೆಸ್ಗೆ ಬಂದ್ರೆ ಸ್ವಾಗತಿಸುವೆ: ಸಿದ್ದರಾಮಯ್ಯ