ಮೈಸೂರು:ಪ್ರವಾಸಕ್ಕೆ ತೆರಳಿದ್ದಾಗ ವಿದ್ಯಾರ್ಥಿನಿಯರಿಗೆ ಮುಖ್ಯ ಶಿಕ್ಷಕ ಹಾಗೂ ಸಿಬ್ಬಂದಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮೈಸೂರಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಹಾಗೂ ಸಿಬ್ಬಂದಿ ವಿರುದ್ಧ ವಿದ್ಯಾರ್ಥಿನಿಯರು ಹಾಗೂ ಪೋಷಕರು ಈ ಆರೋಪ ಮಾಡಿದ್ದಾರೆ. ಪ್ರೌಢಶಾಲೆಯ 52 ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಂಬರ್ 20ರಿಂದ 25ರವರೆಗೆ ಬೇಲೂರು, ಹಳೆಬೀಡು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಾರ್ಕಳ, ಶೃಂಗೇರಿ, ಮುರುಡೇಶ್ವರ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಶೈಕ್ಷಣಿಕ ಪ್ರವಾಸ ತೆರಳಿದ್ದರು.
ಪ್ರವಾಸದ ವೇಳೆ ಬಸ್ಸಿನಲ್ಲಿ ಪಾನಮತ್ತರಾಗಿದ್ದ ಮುಖ್ಯ ಶಿಕ್ಷಕ ಹಾಗೂ ಸಿಬ್ಬಂದಿಯೊಬ್ಬರು, ವಿದ್ಯಾರ್ಥಿನಿಯರು ನಮ್ಮೊಂದಿಗೆ ನೃತ್ಯ ಮಾಡಿ ಹಾಗೂ ಮುತ್ತು ಕೊಡುವಂತೆ ಅಸಭ್ಯವಾಗಿ ವರ್ತಿಸಿರುವ ಆರೋಪ ಎದುರಿಸುತ್ತಿದ್ದಾರೆ. ಅಲ್ಲದೇ ಮುರುಡೇಶ್ವರ ಸಮುದ್ರದ ನೀರಿನಲ್ಲಿ ಆಟ ಆಡುವಾಗ ಹೆಣ್ಣು ಮಕ್ಕಳ ಅಂಗಾಂಗಗಳನ್ನು ಸ್ಪರ್ಶಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಈ ವಿಚಾರವನ್ನು ನೊಂದ ಹೆಣ್ಣು ಮಕ್ಕಳು ಪ್ರವಾಸಕ್ಕೆ ಬಂದಿದ್ದ ಶಿಕ್ಷಕಿಯರಲ್ಲಿ ಹೇಳಿಕೊಂಡಿದ್ದಾರೆ. ಶಿಕ್ಷಕಿಯರು ತಮ್ಮ ಬಳಿಯೇ ವಿದ್ಯಾರ್ಥಿನಿಯರನ್ನು ಇರಿಸಿಕೊಂಡು, ವಾಪಸ್ ಸರಗೂರು ತಾಲೂಕಿನ ಶಾಲೆಗೆ ವಾಪಸ್ ಬಂದಿದ್ದಾರೆ.