ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಗಂಭೀರ ಆರೋಪ ಮೈಸೂರು: ಸ್ಯಾಂಟ್ರೊ ರವಿ ಸೇರಿದಂತೆ ಮೂವರನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ಮೂವರಿಗೂ ಮೈಸೂರಿನ 6 ನೇ ಅಪರ ಜಿಲ್ಲಾ ನ್ಯಾಯಾಧೀಶರು ಎರಡು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬೆಳಗ್ಗೆಯಿಂದ ವಿಜಯನಗರದ ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ, ಶ್ರುತಿಶ್ ಕುಮಾರ್ ಹಾಗೂ ರಾಮ್ ಜಿ ವಿಚಾರಣೆ ಪೊಲೀಸರು ನಡೆಸಿದ್ದರು. ಬಳಿಕ ಸಂಜೆ ಮೈಸೂರಿನ ಆರನೇ ಅಪರ ಜಿಲ್ಲಾ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದರು. ಈ ಸಂಬಂಧ ಜ.16ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎರಡು ದಿನಗಳ ಕಾಲ ಮೈಸೂರು ಜೈಲಿನಲ್ಲಿರುವ ಸ್ಯಾಂಟ್ರೊ ರವಿ ಹಾಗೂ ಮತ್ತಿಬ್ಬರನ್ನು ಕೋರ್ಟ್ ನ ಮುಂದೆ ಹಾಜರುಪಡಿಸಿ ಪೊಲೀಸರು ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಗಂಭೀರ ಆರೋಪ : ಅಹಮದಾಬಾದ್ನಲ್ಲಿ ಸ್ಯಾಂಟ್ರೋ ರವಿಯನ್ನು ಬಂಧಿಸಲಾದ ಜಾಗದ ಸಮೀಪದಲ್ಲೇ ಗೃಹ ಸಚಿವರು ಕಾಣಿಸಿಕೊಂಡಿರುವುದು ಗಮನಿಸಿದರೆ, ಸ್ಯಾಂಟ್ರೋ ರವಿಗೆ ಗೃಹ ಸಚಿವರ ರಕ್ಷಣೆ ಇರುವುದು ಸ್ಪಷ್ಟವಾಗಿದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಗಂಭೀರವಾಗಿ ಆರೋಪ ಮಾಡಿದರು. ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಪ್ರಕರಣಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಒತ್ತಡ ಸಿಎಂ ಹಾಕುವ ಅನಿವಾರ್ಯದ ಹಿಂದೆ ಬಿಜೆಪಿ ಜುಟ್ಟು ಆತನ ಹಿಡಿತದಲ್ಲಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಬಿಜೆಪಿಯ 47 ಮಂದಿ ಹಾಲಿ ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್, 13 ಮಂದಿ ಹಾಲಿ ಸಚಿವರ ಮೇಲೆ ಲೈಂಗಿಕ ಪ್ರಕರಣ ದಾಖಲಾಗಿದೆ. ಬಹುತೇಕ ಬಿಜೆಪಿಗರು ಲೈಂಗಿಕ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅದಕ್ಕೆ ಸಿಡಿಗಳ ವಿಚಾರದಲ್ಲಿ ನ್ಯಾಯಾಲಯದಿಂದ ತಡಯಾಜ್ಞೆ ತಂದಿದ್ದಾರೆ. ಆರಗ ಜ್ಞಾನೇಂದ್ರ ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಹಿಟ್ ಅಂಡ್ ರನ್ ಅನ್ನು ಮಾಡಬಾರದು ಎಂದು ಹೇಳಿದರು.
ಎಡಿಜಿಪಿ 6 ಮಂದಿ ಐಪಿಎಸ್ ಅಧಿಕಾರಿಗಳನ್ನು ಕೂರಿಸಿಕೊಂಡು ಸುದ್ದಿಗೋಷ್ಠಿ ಮಾಡಿ ಆತನನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದ್ದಾರೆ. ಇದನ್ನು ನೋಡಿದರೆ ಸ್ಯಾಂಟ್ರೋ ರವಿ ಕೈಯಲ್ಲಿ ಇವರೆಲ್ಲರ ಜುಟ್ಟು ಇದೆ ಎನಿಸಿದೆ. ದುಡ್ಡು ತೆಗೆದುಕೊಂಡು ಪೊಲೀಸ್ ಇಲಾಖೆ ಸಂಪೂರ್ಣ ಬಿಜೆಪಿ ಹಿಡಿತದಲ್ಲಿಟ್ಟುಕೊಂಡಿದೆ. ಅತ್ಯಾಚಾರ ಕೇಸ್ ಹಾಕಿರುವುದು ಬಿಜೆಪಿಯ ಕಣ್ಣೊರೆಸುವ ತಂತ್ರವಾಗಿದೆ. ಅಲ್ಲದೆ ಬಂಧಿತನ ವಿರುದ್ಧ ದಾಖಲಾದ ಅತ್ಯಾಚಾರ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪೊಲೀಸರು ನೀಡಬೇಕು ಎಂದು ಒತ್ತಾಯಿಸಿದರು.
ಸಿ.ಟಿ ರವಿ ವಿರುದ್ಧ ಕಿಡಿ : ಸಿ.ಟಿ.ರವಿ ಅವರು ನನ್ನ ಮೇಲೆ ಹಾಕಿರುವ ಪ್ರಕರಣವನ್ನು ಸ್ವಾಗತಿಸುತ್ತೇನೆ.ಆದರೆ 2004 ರಲ್ಲಿ ನಿಮ್ಮ ಆದಾಯದ ಮೂಲ ಎಷ್ಟು ಇತ್ತು. 2014ರಲ್ಲಿ 50 ಕೋಟಿ ಹೇಗಾಯ್ತು ಎಂದು ಲಕ್ಷ್ಮಣ್ ಪ್ರಶ್ನಿಸಿದರು. ಇದೇ ವೇಳೆ, ನಿಮ್ಮ ಹೆಸರಿನ ಆಸ್ತಿ ಬಗ್ಗೆ ನಾ ಮಾತನಾಡಿಲ್ಲ. ಭಾವ, ಬಾಮೈದನಿಗೆ ನೀವು ಗುತ್ತಿಗೆ ನೀಡಿದ್ದಿರಿ, ಭಾವನ ಹೆಸರಲ್ಲಿ ಆಸ್ತಿ ಮಾಡಿದ್ದಿರಿ ಎಂದು ಹೇಳಿದ್ದೇನೆಂದರು.
ಇದನ್ನೂ ಓದಿ :ಗೃಹ ಸಚಿವರು ಗುಜರಾತ್ಗೆ ಹೋದ ಮೇಲೆ ಸ್ಯಾಂಟ್ರೋ ರವಿ ಬಂಧನ ಆಗಿದ್ಯಾಕೆ: ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ