ಮೈಸೂರು:ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದ ಶ್ರೀಆದಿಶಕ್ತಿ ಗೌರಮ್ಮ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ಜಾತ್ರಾ ಮಹೋತ್ಸವಕ್ಕೆ ಈ ಬಾರಿ ಕೊರೊನಾದಿಂದಾಗಿ ಹೊರಗಿನ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಿ ಸಂಪ್ರದಾಯದಂತೆ ಗ್ರಾಮಸ್ಥರೇ ಪೂಜಾ ಕೈಂಕರ್ಯಗಳನ್ನು ನಡೆಸಲು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ತಹಶೀಲ್ದಾರ್ ಹಾಗೂ ಆರಕ್ಷಕ ಇಲಾಖೆಯ ಸೂಚನೆಯಂತೆ ಕೊರೊನಾ ಸೋಂಕು ತಡೆಗಟ್ಟುವ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ, ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದ್ದ ಸಾಂಪ್ರದಾಯಿಕ ಪೂಜೆಯನ್ನು ನಿಲ್ಲಿಸದೆ ಸರಳವಾಗಿ ಆಚರಿಸಲು ಗ್ರಾಮಸ್ಥರ ಸಭೆಯಲ್ಲಿ ತೀರ್ಮಾನಿಸಲಾಯಿತು. ಒಂದು ತಿಂಗಳ ಕಾಲದ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಅಸಂಖ್ಯಾತ ಭಕ್ತಾದಿಗಳು ಆಗಮಿಸುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಕಾರಣ ಅವರಿಗೆ ನಿರ್ಬಂಧ ಹೇರಲಾಗಿದೆ.
ಜಾತ್ರೆ ಮತ್ತು ದಾಸೋಹ ರದ್ದು:ಹಬ್ಬದ ಸಂದರ್ಭ ಒಂದು ತಿಂಗಳ ಕಾಲ ಜಾತ್ರೆ ನಡೆಯುತ್ತಿದ್ದ ಕಾರಣ ಭರ್ಜರಿ ವ್ಯಾಪಾರ ವಹಿವಾಟು ಆಗುತ್ತಿತ್ತು. ಮಕ್ಕಳ ಆಟಿಕೆ, ಸಿಹಿ ತಿಂಡಿ, ಪೂಜಾ ಸಾಮಗ್ರಿ ಸೇರಿದಂತೆ ವಿವಿಧ ಬಗೆಯ ಅಂಗಡಿ-ಮುಂಗಟ್ಟುಗಳು ದೇವಾಲಯದ ಬಳಿಯಿಂದ ಮುಖ್ಯರಸ್ತೆಯವರೆಗೂ ತಲೆ ಎತ್ತುತ್ತಿದ್ದವು. ಇದು ಹಲವು ಕುಟುಂಬಗಳ ಜೀವನಾಧಾರಕ್ಕೆ ಸಹಕಾರಿಯಾಗುತ್ತಿತ್ತು. ಕೊರೊನಾ ಅದೆಲ್ಲದಕ್ಕೂ ತಡೆಯೊಡ್ಡಿದೆ. ಭಕ್ತಾದಿಗಳು ಹಾಗೂ ದೇವಾಲಯ ಸಮಿತಿ ಸಹಕಾರದಿಂದ ನಡೆಯುತ್ತಿದ್ದ ಅನ್ನ ದಾಸೋಹವನ್ನು ರದ್ದುಪಡಿಸಲಾಗಿದೆ.
ಶ್ರೀಆದಿಶಕ್ತಿ ಗೌರಮ್ಮ ತಾಯಿ ದೇವಾಲಯ ಸರಳ ಆಚರಣೆ:ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಬಾಗಿಲು ಹಚ್ಚಿ ರಾತ್ರಿ ಸಮಯ ಗ್ರಾಮಸ್ಥರಿಗೆ ಗರ್ಭಗುಡಿಗೆ ಪ್ರವೇಶ ನೀಡದೆ ಹೊರಗಿನಿಂದ ಪೂಜೆಗೆ ಅವಕಾಶ ನೀಡಿ ಸರಳ ಆಚರಣೆಗೆ ಒತ್ತು ನೀಡಲಾಗಿದೆ.
ಗ್ರಾಮಸ್ಥರು ಹೇಳಿದ್ದು ಹೀಗೆ:ನಮ್ಮ ಹಿರಿಯರ ಕಾಲದಿಂದಲೂ ಆದಿಶಕ್ತಿ ಗೌರಮ್ಮ ದೇವರ ಮಹೋತ್ಸವ ವಿಜೃಂಭಣೆಯಿಂದ ಮಾಡುತ್ತಿದ್ದೆವು. ಆದರೆ, ಕೊರೊನಾ ಪರಿಸ್ಥಿತಿಯಲ್ಲಿ ವಿಜೃಂಭಣೆಯ ಆಚರಣೆ ಸಾಧ್ಯವಾಗುತ್ತಿಲ್ಲ. ಗ್ರಾಮದವರಿಗೆ ತೊಂದರೆಯಾಗಬಾರದು. ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರದೆ ನಮ್ಮ ಗ್ರಾಮಸ್ಥರೇ 50 ಜನ ಸೇರಿ ಸರಳವಾಗಿ ಪೂಜೆ ಮಾಡುತ್ತೇವೆ ಎಂದು ಗ್ರಾಮಸ್ಥ ರಮೇಶ್ ತಿಳಿಸಿದರು.