ಮೈಸೂರು: ಪತ್ನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾಗ ತಡೆಯಲು ಬಂದ ಪತಿಗೆ ಮಚ್ಚಿನಿಂದ ಹಲ್ಲೆ ನಡೆಸಿ ಆರೋಪಿ ಪರಾರಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಗ್ರಾಮವೊಂದರಲ್ಲಿ ಇಂದು ನಡೆದಿದೆ. ಗಾಯಗೊಂಡ ದಂಪತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಾರಿಯಾದ ವ್ಯಕ್ತಿಯನ್ನು ನವೀನ್ ಎಂದು ಗುರುತಿಸಲಾಗಿದೆ.
ಮೈಸೂರಿನ ವ್ಯಕ್ತಿಯೊಬ್ಬರ ತೋಟದಲ್ಲಿ ಈ ದಂಪತಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ತೋಟದಲ್ಲಿ ಕೆಲಸ ಮಾಡುತ್ತಿರುವಾಗಲೇ ಘಟನೆ ನಡೆದಿದೆ. ಪತಿ ತೋಟದಲ್ಲಿ ವಿದ್ಯುತ್ ಫ್ಯೂಸ್ ಹಾಕಲು ತೆರಳಿದ್ದರು. ಯಾರೂ ಇಲ್ಲದ ಸಮಯ ನೋಡಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಹಿಂದಿನಿಂದ ಆರೋಪಿ ಆಕ್ರಮಿಸಿದ್ದಾನೆ. ಮಹಿಳೆ ಚೀರಾಟ ನಡೆಸದಂತೆ ಬಾಯಿಗೆ ಬಟ್ಟೆ ತುರುಕಿ ಬಲಾತ್ಕಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ಜೋರಾಗಿ ಕಿರುಚಿದ್ದು, ಅಲ್ಲಿಯೇ ಇದ್ದ ಪತಿ ಓಡಿ ಬಂದಿದ್ದಾರೆ. ರಕ್ಷಿಸಲು ಬಂದ ಪತಿ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಹಲ್ಲೆಯಿಂದ ಗಾಯಗೊಂಡ ದಂಪತಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಕರಕಿಕಟ್ಟಿ, ದಫೆದರ್ ದೊಡ್ಡಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅಪ್ರಾಪ್ತ ನಾದಿನಿಯ ಅತ್ಯಾಚಾರ-25 ವರ್ಷ ಕಠಿಣ ಶಿಕ್ಷೆ:ಅಪ್ರಾಪ್ತ ವಯಸ್ಸಿನ ನಾದಿನಿಯ ಮೇಲೆ ಅತ್ಯಾಚಾರವೆಸಗಿ ಆಕೆ ಗರ್ಭಿಣಿಯಾಗಲು ಕಾರಣನಾದ ವ್ಯಕ್ತಿಗೆ ಮೈಸೂರು ನಗರದ ಪೋಕ್ಸೊ ವಿಶೇಷ ನ್ಯಾಯಾಲಯ 25 ವರ್ಷಗಳ ಕಠಿಣ ಸಜೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿತ್ತು. ಆರೋಪಿ ವಿವಾಹಿತನಾಗಿದ್ದು, ಅಡುಗೆ ಕೆಲಸ ಮಾಡುತ್ತಿದ್ದ. ಈತ ಹೆಚ್ಚಾಗಿ ತನ್ನ ಮಾವನ ಮನೆಯಲ್ಲಿಯೇ ಇರುತ್ತಿದ್ದುದರಿಂದ ನಾದಿನಿಯ ಜೊತೆ ಸಲುಗೆ ಬೆಳೆಸಿಕೊಂಡಿದ್ದ. 2022ರ ಮಾರ್ಚ್‌ನಲ್ಲಿ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ನಾದಿನಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದಾದ ನಂತರವೂ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದರಿಂದ ಬಾಲಕಿ ಗರ್ಭಿಣಿಯಾಗಿದ್ದಳು. ಈ ಬಗ್ಗೆ ಅಪ್ರಾಪ್ತೆಯ ತಾಯಿ ವರುಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ:ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಿದ ಪ್ರಕರಣ ಸಿಐಡಿಗೆ ಹಸ್ತಾಂತರ