ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ರಾಸುಗಳ ರಕ್ಷಣೆ ಮೈಸೂರು :ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ನೂರಕ್ಕೂ ಹೆಚ್ಚು ರಾಸುಗಳನ್ನ ಎಚ್ ಡಿ ಕೋಟೆ ತಾಲೂಕಿನ ಅಂತರ್ ಸಂತೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿದ್ದು, ಎರಡು ಕಂಟೈನರ್ ಹಾಗೂ ಐದು ಬೊಲೆರೋ ವಾಹನದಲ್ಲಿದ್ದ ನೂರಕ್ಕೂ ಹೆಚ್ಚು ರಾಸುಗಳನ್ನು ರಕ್ಷಣೆ ಮಾಡಿದ್ದಾರೆ.
ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಅಂತರ್ ಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ರಾಸುಗಳ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ಮಾಡಿದ್ದಾರೆ. ಎರಡು ಕಂಟೈನರ್ ಹಾಗೂ ಐದು ಬೊಲೆರೋ ವಾಹನಗಳಲ್ಲಿ ರಾಸುಗಳನ್ನು ಸಾಗಿಸಲಾಗುತ್ತಿದ್ದು, ಈ ರಾಸುಗಳನ್ನು ಕೇರಳ ಗಡಿ ಭಾಗ ದಾಟುವ ಮುನ್ನವೇ ಪೊಲೀಸರು ದಾಳಿ ನಡೆಸಿ, ವಾಹನವನ್ನು ತಡೆದಿದ್ದಾರೆ. ಈ ಸಂದರ್ಭದಲ್ಲಿ ವಾಹನ ಚಾಲನೆ ಮಾಡುತ್ತಿದ್ದ ಆರೋಪಿಗಳು ಪೊಲೀಸರು ದಾಳಿ ಮಾಡುತ್ತಿದ್ದಂತೆ ರಾಸುಗಳು ಇದ್ದ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ಅದರಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇರಳಕ್ಕೆ ಹಸು, ಎಮ್ಮೆ, ಕರುಗಳನ್ನು ಸಾಗಿಸಲಾಗುತ್ತಿತ್ತು. ಇಂತಹ ನೂರಕ್ಕೂ ಹೆಚ್ಚು ರಾಸುಗಳನ್ನು ಪೊಲೀಸರು ರಕ್ಷಿಸಿದ್ದು, ಕೆಲವು ರಾಸುಗಳು ನಿತ್ರಾಣಗೊಂಡ ಸ್ಥಿತಿಯಲ್ಲಿ ಕಂಡುಬಂದಿವೆ. ಎಲ್ಲ ರಾಸುಗಳನ್ನು ಅಂತರ್ಸಂತೆ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಮೈದಾನದಲ್ಲಿ ಇರಿಸಲಾಗಿದೆ. ರಕ್ಷಿಸಲಾದ ರಾಸುಗಳನ್ನು ಮೈಸೂರಿನ ಪಿಂಜಾರಾಪೋಲ್ಗೆ ರವಾನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ವಶಕ್ಕೆ ಪಡೆದಿರುವ ಇಬ್ಬರು ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, ಎಚ್ ಡಿ ಕೋಟೆ ತಾಲೂಕಿನ ಅಂತರ್ ಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ರಾಸುಗಳನ್ನು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿ, ತನಿಖೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಅಕ್ರಮವಾಗಿ ಕೂಡಿ ಹಾಕಿದ್ದ ಗೋವುಗಳ ರಕ್ಷಣೆಗೆ ಮುಂದಾಗಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ