ಮೈಸೂರು: ಹಿಂದೂ ಧರ್ಮ ಧರ್ಮವೇ ಅಲ್ಲ. ಹಿಂದೂ ಧರ್ಮ ಎಂದರೆ ಬ್ರಾಹ್ಮಣರು. ಬ್ರಾಹ್ಮಣರ ಧರ್ಮವೇ ಹಿಂದೂ ಧರ್ಮವೆಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಟೀಕಿಸಿದ್ದಾರೆ.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಜನರಿಗೆ ಹಿಂದೂ ಎಂದರೆ ಗೊತ್ತೇ ಇಲ್ಲ. ನೀವು ಯಾವ ಧರ್ಮ ಎಂದರೆ? ವಕ್ಕಲಿಗ, ಕುರುಬ ಎಂಬ ಜಾತಿಗಳ ಹೆಸರನ್ನಷ್ಟೇ ಹೇಳ್ತಾರೆ. ಹೀಗಾಗಿ, ಹಿಂದೂ ಪದವನ್ನು ತೆಗೆದು ಹಾಕಬೇಕು ಎಂದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾಧ್ಯಗೋಷ್ಠಿಯಲ್ಲಿ ಪ್ರಗತಿಪರ ಚಿಂತಕ ಕೆ.ಎಸ್.ಭಗವಾನ್ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು, ಮುಸ್ಲಿಮರನ್ನು ಕೊಳಕು ಎನ್ನುವ ನೀವು, ಅವರ ಬಾಯಿಂದ ಬಂದಿರುವ ಹಿಂದೂ ಪದವನ್ನು ನಿಮ್ಮ ಧರ್ಮಕ್ಕೆ ಇಟ್ಟಿದ್ದೀರಿ. ನಿಮಗೆ ಮಾನ ಮರ್ಯಾದೆ ಇದ್ರೆ ಆ ಪದವನ್ನು ತೆಗೆದು ಹಾಕಿ. ಪರ್ಶಿಯನ್ನರು 'ಸಿಂಧೂ' ಪದವನ್ನು ಹಿಂದೂ ಎಂದರು. ಅವರು ಬಳಸಿದ ಪದವನ್ನು ನಿಮ್ಮ ಧರ್ಮದ ಹೆಸರಿಗೆ ಬಳಸಿಕೊಂಡಿದ್ದೀರಿ ಎಂದು ವ್ಯಂಗ್ಯವಾಡಿದರು.
ಹಿಂದೂ ಎಂದರೆ ಬ್ರಾಹ್ಮಣರು, ಉಳಿದವರೆಲ್ಲಾ ಶೂದ್ರರು. ಶೂದ್ರರು ಎಂದರೆ ಮನುಸ್ಮೃತಿಯಲ್ಲಿ ವೇಶ್ಯೆಯರು ಎಂದು ಉಲ್ಲೇಖವಾಗಿದೆ. ಆ ಪದ ಬಿಟ್ಟು ನಿಮಗೆ ಬೇರೆ ಹುಡುಕಲು ಆಗಿಲ್ವಾ? ಎಂದು ಅವರು ಪ್ರಶ್ನಿಸಿದರು.
ಮಹಿಷ ದಸರಾ ಆಚರಣೆ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಅ.15ರಂದು ಮಹಿಷ ದಸರಾ ಆಚರಣೆ ಮಾಡಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಅನುಮತಿ ದೊರೆಯುವ ವಿಶ್ವಾಸ ಇದೆ. ಪುಷ್ಪಾರ್ಚನೆಗೆ ಮಾತ್ರ ಸೀಮಿತ ಮಾಡಿ ಕಾರ್ಯಕ್ರಮ ಮಾಡುತ್ತೇವೆ ಎಂದರು.
ಆರೋಗ್ಯ ಇಲಾಖೆ ಮಾರ್ಗಸೂಚಿಯಂತೆ ಕಾರ್ಯಕ್ರಮವನ್ನು ಮಾಡುತ್ತೇವೆ. ಮರೆತುಹೋದ ಮೈಸೂರಿನ ಪ್ರಾಚೀನ ಅಸ್ಮಿತೆಯನ್ನು ಸ್ಮರಿಸುವ ದಿನಾಚರಣೆಯಾಗಿ ಆಚರಣೆ ಮಾಡುತ್ತೇವೆ. ಪ್ರತಿವರ್ಷ ಅನುಮತಿ ಕೊಡಲು ಅವಕಾಶ ಇದೆ. ನಮ್ಮ ಆಚರಣೆ- ಸಂಸ್ಕೃತಿಗೆ ಧಕ್ಕೆ ಬಂದ್ರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ, ಕೋವಿಡ್ ಇರುವುದರಿಂದ ಸರಳವಾಗಿ ಆಚರಿಸಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.