ಮೈಸೂರು: ಲಲಿತಾದ್ರಿ ಬೆಟ್ಟದ ಬಳಿ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ 7ನೇ ಆರೋಪಿಯನ್ನು ಬಂಧಿಸಲು ಮೈಸೂರು ಪೊಲೀಸರ ತಂಡ ತಮಿಳುನಾಡಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಈಗಾಗಲೇ ಆರು ಆರೋಪಿಗಳನ್ನು ಬಂಧಿಸಲಾಗಿದೆ. 7ನೇ ಆರೋಪಿಗಾಗಿ ತಿರುಪ್ಪುರ್ನಲ್ಲಿ ಹುಡುಕಾಟ ಮುಂದುವರಿದಿದೆ. ಆರು ಮಂದಿ ಇನ್ಸ್ಪೆಕ್ಟರ್, ಆರು ಮಂದಿ ಸಬ್ಇನ್ಸ್ಪೆಕ್ಟರ್ ನೇತೃತ್ವದ 20 ಮಂದಿ ನೇತೃತ್ವದ ಪೊಲೀಸರ ತಂಡವು ತಮಿಳುನಾಡಿನಲ್ಲೇ ಬೀಡುಬಿಟ್ಟಿದ್ದು, ಮೊಬೈಲ್ ಟವರ್ ಲೊಕೇಷನ್ ಜಾಡು ಹಿಡಿದು ಆರೋಪಿಯ ತಲಾಶ್ ನಡೆಸುತ್ತಿದ್ದಾರೆ.
ತಲೆಮರೆಸಿಕೊಂಡಿರುವ ಆರೋಪಿ, ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡಿದ್ದು, ತನ್ನ ಮನೆಗೂ ಬಾರದೆ ನಾಪತ್ತೆಯಾಗಿದ್ದಾನೆ. ಸ್ಥಳೀಯ ಪೊಲೀಸರ ನೆರವಿನಿಂದ ಆರೋಪಿಯ ಪತ್ತೆಗೆ ಮೈಸೂರು ಪೊಲೀಸರು ಮುಂದಾಗಿದ್ದಾರೆ. ಆತನ ಸಂಬಂಧಿಗಳು, ಸ್ನೇಹಿತರ ಮೊಬೈಲ್ ಕರೆಗಳ ಮೇಲೆ ನಿಗಾ ಇರಿಸಿ 7ನೇ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ತಮಿಳುನಾಡಿನಲ್ಲಿ ಸ್ಥಳ ಮಹಜರು
ಐವರು ಆರೋಪಿಗಳ ಪೈಕಿ ಮೂವರನ್ನು ನ್ಯಾಯಾಲಯದ ಅನುಮತಿ ಪಡೆದು ತಿರುಪ್ಪುರ್ಗೆ ಕರೆದೊಯ್ದಿರುವ ಪೊಲೀಸರು ಅಲ್ಲಿನ ಕೆಲ ಸ್ಥಳಗಳಲ್ಲಿ ಪರಿಶೀಲಿಸಿ, ಅಗತ್ಯ ಸಾಕ್ಷ್ಯ, ಗ್ಯಾಂಗ್‌ರೇಪ್ ನಡೆದ ದಿನ ಧರಿಸಿದ್ದ ಬಟ್ಟೆಗಳನ್ನು ಅವರವರ ಮನೆಯಿಂದ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೇ, ಈ 7 ಮಂದಿ ಆರೋಪಿಗಳ ವಿರುದ್ಧ ತಮಿಳುನಾಡಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಅಪರಾಧ ಪ್ರಕರಣಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆರೋಪಿಗಳ ಹಿನ್ನೆಲೆ ತಿಳಿದುಕೊಂಡು ಸಾಕ್ಷ್ಯಗಳನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಮೈಸೂರಿನಲ್ಲಿ ಪೊಲೀಸರ ವಶದಲ್ಲಿರುವ ಆರೋಪಿಗಳನ್ನು ಅಜ್ಞಾತ ಸ್ಥಳದಲ್ಲಿ ಎಸಿಪಿ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ತನಿಖೆಗೆ ಅಗತ್ಯವಿರುವ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ:ರೋಹಿಣಿ ಸಿಂಧೂರಿ ವಿರುದ್ಧ ಭ್ರಷ್ಟಾಚಾರ ಆರೋಪ: ದಾಖಲೆ ಬಿಡುಗಡೆ ಮಾಡಿದ ಶಾಸಕ ಸಾ.ರಾ.ಮಹೇಶ್