ಮೈಸೂರು: ಮತದಾರರು ನಿಮ್ಮ ಮುಖ ನೋಡಿ ಮತ ಹಾಕಿಲ್ಲ, ಗ್ಯಾರಂಟಿ ಕಾರ್ಡ್ ನೋಡಿ ಮತ ಹಾಕಿ ನಿಮಗೆ 135 ಸೀಟ್ ಕೊಟ್ಟಿದ್ದಾರೆ. ನೀವು ಕೊಟ್ಟಿರುವ ಭರವಸೆಗಳನ್ನು ಈಡೇರಿಸಿ, ಇಲ್ಲದ್ದಿದ್ದರೆ ನಾವು ಹೋರಾಟ ಮಾಡಬೇಕಾಗುತ್ತದೆ. ಬಿಜೆಪಿ ಸೋತಿದೆ ಹೊರತು ಸತ್ತಿಲ್ಲ ಎಂದು ಮಾಧ್ಯಮಗೋಷ್ಟಿಯಲ್ಲಿ ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿಯ, ಮೈಸೂರು ನಗರದ ಮಣಿಪಾಲ್ ಆಸ್ಪತ್ರೆಯ ಸಿಗ್ನಲ್ ನಲ್ಲಿ ಉಂಟಾಗಿರುವ ಟ್ರಾಫಿಕ್ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿ, ನಂತರ ಮಾಧ್ಯಮಗೋಷ್ಠಿ ನಡೆಸಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
ಅಭಿವೃದ್ಧಿಗಾಗಿ ಯಾರ ಕಾಲು ಬೇಕಾದರೂ ಹಿಡಿಯುತ್ತೇನೆ :ಮೈಸೂರು ಮತ್ತು ಕೊಡಗಿನ ಅಭಿವೃದ್ಧಿಗಾಗಿ ಯಾರ ಕಾಲನ್ನ ಬೇಕಾದರೂ ಹಿಡಿಯುತ್ತೇನೆ. ಚುನಾವಣೆ ಬಂದಾಗ ರಾಜಕಾರಣ ಮಾಡೋಣ, ಉಳಿದ ಸಮಯದಲ್ಲಿ ಅಭಿವೃದ್ಧಿ ರಾಜಕಾರಣ ಮಾಡೋಣ. ಕುರ್ಚಿ ಯಾರಿಗೂ ಶಾಶ್ವತ ಅಲ್ಲ. ಇದ್ದಾಗ ಅಭಿವೃದ್ಧಿ ಮಾಡಬೇಕು. ನಾನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಅಭಿನಂದನೆ ಸಲ್ಲಿಸಿ, ಅಭಿವೃದ್ಧಿಗೆ ಸಹಾಯ ಮಾಡುವಂತೆ ಕೇಳುತ್ತೇನೆ. ಅಭಿವೃದ್ಧಿಗಾಗಿ ಯಾರ ಕಾಲನ್ನ ಬೇಕಾದರೂ ಹಿಡಿಯಲು ಸಿದ್ಧನಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಇದೇ ವೇಳೆ ಹೇಳಿಕೆ ನೀಡಿದರು.
ಲೋಕಸಭೆ ಫಲಿತಾಂಶದ ಮೇಲೆ ಪ್ರಭಾವ ಬೀರಲ್ಲ:ವಿಧಾನಸಭೆ ಚುನಾವಣೆಯ ಫಲಿತಾಂಶ ಲೋಕಸಭಾ ಚುನಾವಣೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ದೇಶಕ್ಕೆ ಎಂತಹ ನಾಯಕರು ಬೇಕೆಂಬುದು ರಾಜ್ಯದ ಜನರಿಗೆ ಗೊತ್ತಿದೆ. ಒಂದು ಚುನಾವಣೆಗೂ ಮತ್ತೊಂದು ಚುನಾವಣೆಗೂ ವ್ಯತ್ಯಾಸ ಇದೆ ಎಂದರು.
ಗ್ಯಾರಂಟಿ ಕಾರ್ಡ್ ವಿಚಾರದಲ್ಲಿ ಬಿಜೆಪಿ ಎಚ್ಚೆತ್ತುಕೊಳ್ಳಬೇಕಾಗಿತ್ತು. ಬಿಜೆಪಿ ಅವತ್ತು ಎಚ್ಚೆತ್ತುಕೊಂಡಿದ್ದರೆ, ಈ ಸ್ಥಿತಿ ಬರುತ್ತಿರಲಿಲ್ಲ. ಗ್ಯಾರಂಟಿ ಆಶ್ವಾಸನೆಗಳನ್ನ ಕಾಂಗ್ರೆಸ್ ಈಡೇರಿಸಬೇಕು. ಇಲ್ಲದಿದ್ದರೆ ಜೂನ್ ಒಂದರಿಂದ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ಜೂನ್ 1 ರಿಂದ 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಹಣ ಪಾವತಿಸಬೇಡಿ. 200 ಯೂನಿಟ್ ಗಿಂತ ಹೆಚ್ಚು ಬಳಸಿದರೆ, ಹೆಚ್ಚುವರಿಗೆ ಮಾತ್ರ ಬಿಲ್ ಕಟ್ಟಿ ಎಂದು ಜನತೆಗೆ ಸಂಸದರು ಕರೆ ಸಲಹೆ ನೀಡಿದರು. ಸಿಎಂ ಕುರ್ಚಿ ಯಾರ ಸ್ವತ್ತು ಅಲ್ಲ. ಆದರೆ ಆಡಳಿತ ವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆ ಶಾಶ್ವತವಾಗಿ ಇರುತ್ತದೆ. ವಿಧಾನ ಸಭೆಯಲ್ಲಿ ಕುಳಿತು ಪೊಲೀಸರಿಗೆ ಧಮ್ಕಿ ಹಾಕುವುದನ್ನು ನಿಲ್ಲಿಸಿ. ಆಡಳಿತವನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ಎರಡು ತಿಂಗಳ ಹಿಂದೆ ಅಶ್ವತ್ಥನಾರಾಯಣ್ ಅವರು ಹೇಳಿದ ಹೇಳಿಕೆಗೆ ಈಗ ಎಫ್ಐಆರ್ ಹಾಕಿಸುವುದು ಎಷ್ಟು ಸರಿ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.