ಮೈಸೂರು : ಸನಾತನ ಧರ್ಮ ಮಲೇರಿಯಾ, ಡೆಂಗ್ಯೂ ಇದ್ದಂತೆ. ಅದನ್ನು ಬೇರು ಸಮೇತ ನಿರ್ಮೂಲನೆ ಮಾಡಬೇಕು ಎಂದಿರುವ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ.
ನಗರದಲ್ಲಿ ಚಾತುರ್ಮಾಸ ವ್ರತದಲ್ಲಿರುವ ಶ್ರೀಗಳು ಈ ಕುರಿತು ಹೇಳಿಕೆ ನೀಡಿದ್ದು, "ಒಂದು ರಾಜ್ಯದ ಮಂತ್ರಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಉದಯನಿಧಿ ಸ್ಟಾಲಿನ್ ಅವರು ಸಮಾಜದಲ್ಲಿ ಇಂತಹ ವಿಷ ಬೀಜ ಬಿತ್ತುವುದು ಸರಿಯಲ್ಲ" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಸನಾತನ' ಎಂದರೆ ಸದಾಕಾಲವೂ ಇರುವಂತಹದ್ದು ಎಂದರ್ಥ. ಎಲ್ಲರೂ ಸುಖವಾಗಿ ಬದುಕಲು ಅಳವಡಿಸಿಕೊಳ್ಳುವ ಸೂತ್ರವೇ ಧರ್ಮ. ನಮ್ಮ ಸುಖದಿಂದ ಅಕ್ಕಪಕ್ಕದವರಿಗೆ ದುಃಖವಾಗಬಾರದು. ಬದಲಾಗಿ ನಮ್ಮ ಸುಖದಿಂದ ಅಕ್ಕಪಕ್ಕದವರಿಗೂ ಸಂತೋಷ ಲಭಿಸಬೇಕು ಎಂದು ಸನಾತನ ಧರ್ಮ ತಿಳಿಸುತ್ತದೆ. ಅಂತಹ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎನ್ನುವ ಮನೋಪ್ರವೃತ್ತಿ ಸರಿಯಲ್ಲ, ಅದನ್ನು ಖಂಡಿಸುತ್ತೇವೆ ಎಂದು ಶ್ರೀಗಳು ಹೇಳಿದ್ದಾರೆ.
ಏನಿದು ಹೇಳಿಕೆ? : ತಮಿಳುನಾಡು ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಸಚಿವ ಉದಯನಿಧಿ ಸ್ಟಾಲಿನ್ ಅವರು, ‘ಸನಾತನಂ ಎಂದರೇನು?, ಈ ಪದ ಸಂಸ್ಕೃತದ್ದು. ಸಮಾನತೆ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದದ್ದು. ಇದು ಕೊರೊನಾ, ಡೆಂಗ್ಯೂ, ಮಲೇರಿಯಾಕ್ಕೆ ಸಮಾನವಾದದ್ದು. ಆದ್ದರಿಂದ ಇಂಥದ್ದನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಹೇಳಿಕೆ ನೀಡಿದ್ದರು.