ಮೈಸೂರು:ಲಾಕ್ಡೌನ್ ಸಡಿಲಿಕೆ ಹಿನ್ನೆಲೆ ಟ್ಯಾಕ್ಸಿ ಸಂಚಾರಕ್ಕೆ ಸರ್ಕಾರ ಅನುಮತಿ ಕೊಟ್ಟರೂ ಪ್ರಯಾಣಿಕರು ಬರದಿರುವುದರಿಂದ ಟ್ಯಾಕ್ಸಿ ಚಾಲಕರಿಗೆ ಸಿಡಿಲು ಬಡಿದಂತಾಗಿದೆ. ಲಾಕ್ಡೌನ್ ಕಾರಣ ಎರಡು ತಿಂಗಳಿನಿಂದ ವನವಾಸ ಅನುಭವಿಸಿದ್ದ ಟ್ಯಾಕ್ಸಿ ಡ್ರೈವರ್ಗಳಿಗೆ, ಸರ್ಕಾರವೇನೋ ಸಹಾಯಧನದ ಭರವಸೆ ನೀಡಿತ್ತು. ಆದರೆ ಪ್ರಯಾಣಿಕರೇ ಬಾರದಿರುವುದರಿಂದ ಟ್ಯಾಕ್ಸಿ ನಿಲ್ದಾಣದಲ್ಲಿ ಕಾರುಗಳು ಬಾಡಿಗೆ ಇಲ್ಲದೆ ನಿಂತಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರವೇನೋ ಮೂರು ತಿಂಗಳು ಇಎಂಐ ಕಟ್ಟದಂತೆ, ವಾಹನ ತೆರಿಗೆ ಕಟ್ಟದಂತೆ ಚಾಲಕರಿಗೆ ಸೂಚನೆ ನೀಡಿದೆ. ಆದರೆ, ಮೂರು ತಿಂಗಳ ನಂತರ ನಮ್ಮ ಗತಿಯೇನು ಎಂಬ ಚಿಂತೆ ಚಾಲಕರಲ್ಲಿ ಗಾಢವಾಗಿ ಕಾಡತೊಡಗಿದೆ. ಚಾಲಕರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ 5,000 ರೂಪಾಯಿ ನೀಡುತ್ತಿದೆ. ಅದನ್ನು ನೇರವಾಗಿ ಬ್ಯಾಂಕ್ ಖಾತೆಗೆ ಹಾಕುತ್ತಿರುವುದರಿಂದ 'ಸೇವಾಸಿಂಧು' ವೆಬ್ ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.