ಚಲಿಸುವ ಸರ್ಕಾರ ಯೋಜನೆ ಹೊತ್ತ ವಾಹನ ಮೈಸೂರು:ನಮ್ಮದು ಬಡವರು, ದೀನ ದಲಿತರು ಹಾಗೂ ಕಾರ್ಮಿಕರ ಪರವಾದ ಸರ್ಕಾರ. ರಾಜ್ಯದ 54 ಲಕ್ಷ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಾರ್ಷಿಕ 10 ಸಾವಿರ ಸಹಾಯ ಧನವನ್ನು ರೈತರ ಖಾತೆಗಳಿಗೆ ನೇರವಾಗಿ ನೀಡಲಾಗುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು. ಜಿಲ್ಲಾಡಳಿತದಿಂದ ಮಹಾರಾಜ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ 6 ಸಾವಿರ ಹಾಗೂ ರಾಜ್ಯ ಸರ್ಕಾರ 4 ಸಾವಿರ ರೂಪಾಯಿಗಳನ್ನು ನೀಡುತ್ತಿದೆ. ಮೈಸೂರು ಜಿಲ್ಲೆಯ ಜನತೆ ಸರ್ಕಾರದ ಒಂದಿಲ್ಲ ಒಂದು ಸೌಲಭ್ಯ ಪಡೆದಿರುವುದು ನಮ್ಮ ಸರ್ಕಾರಕ್ಕೆ ಸಂತಸ ತಂದಿದೆ. ಮುಂದೆಯೂ ನಮ್ಮ ಸರ್ಕಾರವು ಬಡವರ ಪರ ನೊಂದವರ ಪರ ಕೆಲಸ ನಿರ್ವಹಿಸುವ ಸಂಕಲ್ಪ ಹೊಂದಿದ್ದೇವೆ ಎಂದು ತಿಳಿಸಿದರು.
ಕೋವಿಡ್ ವೇಳೆ ಜನಪರ ಕರ್ತವ್ಯ ನಿರ್ವಹಿಸಿದ ಸರ್ಕಾರ: ಕೋವಿಡ್ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮರ್ಥವಾಗಿ ನಿರ್ವಹಿಸಿದೆ. ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ದೇಶದ 130 ಕೋಟಿ ಜನತೆಗೂ ಎರಡು ಡೋಸ್ಗಳ ಕೋವಿಡ್ ಲಸಿಕೆ ಉಚಿತವಾಗಿ ನೀಡಿದ್ದಾರೆ. ಸರ್ಕಾರವು ಯಾವ ಸಂದರ್ಭದಲ್ಲಿಯು ಕೂಡ ಸಾರ್ವಜನಿಕರ ಕೈಬಿಡದೇ ಜನಪರವಾಗಿ ಕರ್ತವ್ಯ ನಿರ್ವಹಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಜಾರಿ:ರಾಜ್ಯ ಸರ್ಕಾರದ ರೈತ ವಿದ್ಯಾ ಯೋಜನೆಯಡಿ ರಾಜ್ಯದಲ್ಲಿ 13 ಲಕ್ಷ ಹಾಗೂ ಮೈಸೂರು ವಿಭಾಗದಲ್ಲಿ 20 ಸಾವಿರಕ್ಕೆ ಹೆಚ್ಚಿನ ರೈತರ ಮಕ್ಕಳಿಗೆ ಸಹಾಯಧನ ನೀಡಲಾಗುತ್ತಿದೆ. ರೈತರ ಹಾಗೂ ಕಾರ್ಮಿಕರ ಮಕ್ಕಳಿಗೆ 4 ಸಾವಿರ ವಿಶೇಷ ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ. ಆಶ್ರಯ ಯೋಜನೆಯಡಿ ಮನೆ ನಿರ್ಮಾಣಕ್ಕೆ 2 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿಯವರಿಗೆ ಭೂ ಒಡೆತನ ಯೋಜನೆಯಡಿ ಭೂಮಿಕೊಳ್ಳಲು ಸರ್ಕಾರದಿಂದ 20 ಲಕ್ಷದ ವರಗೆ ಸಹಾಯಧನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಭಾಗವಹಿಸಿದ್ದ ಜನಸ್ತೋಮ 5.5 ಕೋಟಿ ಜನರಿಗೆ ವಿವಿಧ ಯೋಜನೆಯಡಿ ಸರ್ಕಾರ ನೆರವು:ರಾಜ್ಯದಲ್ಲಿ 5.5 ಕೋಟಿ ಜನರಿಗೆ ಹಾಗೂ ಮೈಸೂರಿನ 18 ಲಕ್ಷ ಜನರಿಗೆ ಸರ್ಕಾರದ ಒಂದಿಲ್ಲೊಂದು ಯೋಜನೆಯಡಿ ಸೌಲಭ್ಯ ಪಡೆದುಕೊಂಡಿದ್ದಾರೆ. ಪಿ ಯು ಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೇ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಸ್ತ್ರೀ ಸಾಮರ್ಥ್ಯ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ರಾಜ್ಯದ ಯುವಕರಿಗೆ ಅನುಕೂಲವಾಗುವಂತೆ ಸ್ವಾಮಿ ವಿವೇಕಾನಂದ ಯೋಜನೆಯಡಿ 2 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ.
ಡಯಾಲಿಸಿಸ್ ಕಿಮಿಯೋ ಥೆರಫಿ ಚಿಕಿತ್ಸೆಗೆ ಸಹಾಯಧನ:ಶ್ರವಣ ದೋಷ ಇರುವ ಮಕ್ಕಳಿಗೆ ಉಚಿತವಾಗಿ ಶ್ರವಣ ಸಾಧನ ಅಳವಡಿಸಲು 500 ಕೋಟಿ ಮೀಸಲಿಡಲಾಗಿದ್ದು, ಡಯಾಲಿಸಿಸ್ ಮಾಡಿಸುವರಿಗೆ 1 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಕ್ಯಾನ್ಸರ್ಗೆ ಒಳಗಾದ ಬಡವರಿಗೆ ಕಿಮಿಯೋ ಥೆರಫಿ ಚಿಕಿತ್ಸೆಯನ್ನು ಉಚಿತವಾಗಿ ಮಾಡಿಸಲಾಗುತ್ತಿದೆ ಎಂದರು.
ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ:ಪರಿಶಿಷ್ಟ ಜಾತಿಯವರಿಗೆ ಮೀಸಲಾತಿಯನ್ನು ಶೇಕಡಾ 15 ರಿಂದ 17 ಕ್ಕೆ ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇಕಡಾ 3 ರಿಂದ 7 ಮೀಸಲಾತಿ ಹೆಚ್ಚಿಸಲಾಗಿದೆ. ಹಿಂದುಳಿದ ವರ್ಗಗಳ ಬೆಳವಣಿಗೆಗೆ ಸರ್ಕಾರವು ಶ್ರಮಿಸುತ್ತದೆ ಎಂದರು. ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲು 1 ಸಾವಿರ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳನ್ನು ತೆರೆದು ಕಡಿಮೆ ದರದಲ್ಲಿ ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಕೆಂದ್ರ ಸರ್ಕಾರವು ಮಾಡಿದೆ ಎಂದರು. ಶಾಸಕ ಎಲ್ ನಾಗೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಚಲಿಸುವ ಸರ್ಕಾರ ವಾಹನಕ್ಕೆ ಸಿಎಂ ಚಾಲನೆ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಜನಪರ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಕ್ಷಣ ಮಾತ್ರದಲ್ಲಿ ಮಾಹಿತಿ ಒದಗಿಸಬಹುದಾದ ಗವರ್ನಮೆಂಟ್ ಆನ್ ವ್ಹೀಲ್ಸ್ ಚಲಿಸುವ ಸರ್ಕಾರ ಯೋಜನೆ ಹೊತ್ತ ವಾಹನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಮೈಸೂರಿನಲ್ಲಿ ಚಾಲನೆ ನೀಡಿದರು. ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಮೈಸೂರು ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಪರಿಕಲ್ಪನೆಯಲ್ಲಿ ಈ ಯೋಜನೆ ಜಾರಿ ಮಾಡಲಾಗಿದೆ. ನಗರದ ಲಲಿತ ಮಹಲ್ ಹೋಟೆಲ್ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗವರ್ನಮೆಂಟ್ ಆನ್ ವ್ಹೀಲ್ಸ್ ಚಲಿಸುವ ಸರ್ಕಾರಕ್ಕೆ ಸಿಎಂ ಹಸಿರು ನಿಶಾನೆ ತೋರಿದರು.
ಗವರ್ನನ್ಮೆಂಟ್ ಆನ್ ವ್ಹೀಲ್ಸ್ ಚಲಿಸುವ ಸರ್ಕಾರಕ್ಕೆ ಸಿಎಂ ಹಸಿರು ನಿಶಾನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಂತೆ ಕೇಂದ್ರ ಸರ್ಕಾರದ 202 ಯೋಜನೆಗಳು ಹಾಗೂ 101 ಕಾರ್ಯಕ್ರಮಗಳನ್ನು ಒಳಗೊಂಡ ಮೈ ಸ್ಕೀಮ್ ಗಳಲ್ಲಿ ಇರುವ ಎಲ್ಲ ಯೋಜನೆಗಳನ್ನು ಮುಟ್ಟಿಸುವ ಪ್ರಯತ್ನ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಆನ್ ಲೈನ್ ನಲ್ಲಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವುದು ಮತ್ತು ಅರ್ಜಿಗಳನ್ನು ಸ್ವೀಕಾರ ಮಾಡುವ ಹಾಗೂ ಅದಕ್ಕೆ ತಾರ್ಕಿಕ ಅಂತ್ಯ ನೀಡುವ ಈ ಹೊಸ ಯೋಜನೆಯನ್ನು ಚಲಿಸುವ ಸರ್ಕಾರ ಹೊತ್ತ ವಾಹನದಲ್ಲಿ ಅಳವಡಿಸಲಾಗಿದೆ.
ಸಮಾವೇಶದ ಎದುರು ಪೌರ ಕಾರ್ಮಿಕರಿಂದ ಪ್ರತಿಭಟನೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ, ಯೋಜನೆಗಳ ಫಲಾನುಭವಿಗಳು ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ವಿವಿಧ ಇಲಾಖೆಯ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆ ಮಾಡಿ, ಕಾರ್ಯಕ್ರಮ ಮುಗಿಯುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿ ಇದ್ದ ಪೌರ ಕಾರ್ಮಿಕರು ನಮ್ಮನ್ನು ಕಾಯಂಗೊಳಿಸಬೇಕು. ನಮಗೆ ನ್ಯಾಯಬೇಕು ಎಂದು ಪ್ರತಿಭಟಿಸಿದರು.
ಮೂರು ದಿನಗಳಿಂದ ಮೈಸೂರು ಮಹಾನಗರ ಪಾಲಿಕೆ ಎದುರು ತಮ್ಮನ್ನು ಕಾಯಂ ಮಾಡಲು ಪ್ರತಿಭಟನೆ ನಡೆಸುತ್ತಿದ್ದು. ಇಂದು ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿಗಳ ಸಮಾವೇಶ ಕಾರ್ಯಕ್ರಮಕ್ಕೆ ಆಗಮಿಸಿ, ವೇದಿಕೆ ಮುಂಭಾಗದಲ್ಲಿ ಕುಳಿತು, ಕಾರ್ಯಕ್ರಮ ಮುಗಿಯುತ್ತಿದ್ದಂತೆ, ಪ್ರತಿಭಟನೆ ಮೂಲಕ ಗಮನ ಸೆಳೆಯಲು ಪೌರ ಕಾರ್ಮಿಕರು ಯತ್ನಿಸಿದರು.
ಇದನ್ನೂಓದಿ:ನಮ್ಮ ಪಕ್ಷದಲ್ಲಿ ಪ್ರಾಥಮಿಕ ತನಿಖಾ ವರದಿ ಬರುವವರೆಗೂ ಉಚ್ಛಾಟನೆ ಮಾಡುವ ವ್ಯವಸ್ಥೆ ಇಲ್ಲ: ಸಿ.ಟಿ.ರವಿ