ಮೈಸೂರು: ರೈತರಿಗೆ ನೀಡುವ ರಸಗೊಬ್ಬರ ಮೂಟೆಯ ತೂಕದಲ್ಲಿ ವಂಚಿಸುತ್ತಿದ್ದ ಅಂಗಡಿಯ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿ ಅಂಗಡಿಗೆ ಬೀಗ ಜಡಿದರು.
ಹುಲ್ಲಹಳ್ಳಿಯಲ್ಲಿರುವ ರಾಸಾಯನಿಕ ಗೊಬ್ಬರ ಮಾರಾಟ ಮಳಿಗೆಯಲ್ಲಿ ರೈತರಿಗೆ ಮಾರಾಟ ಮಾಡುತ್ತಿದ್ದ ರಸಗೊಬ್ಬರದ ತೂಕದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ ಎಂಬ ಬಗ್ಗೆ ರೈತರು ಕೃಷಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಕೃಷಿ ಅಧಿಕಾರಿ ಅಂಗಡಿಗೆ ಬಂದು ಪರಿಶೀಲನೆ ನಡೆಸಿದಾಗ ವ್ಯತ್ಯಾಸ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ರಸಗೊಬ್ಬರ ಅಂಗಡಿಗೆ ನೋಟಿಸ್ ಕೊಟ್ಟಿದ್ದಾರೆ.
ಕೃಷಿ ಅಧಿಕಾರಿಗಳಿಂದ ರಸಗೊಬ್ಬರ ಅಂಗಡಿಗೆ ನೋಟಿಸ್ ಈ ಅಂಗಡಿಯಲ್ಲಿ 50 ಕೆ.ಜಿ ತೂಕದ ರಸಗೊಬ್ಬರ ಮೂಟೆ ಕೇವಲ 35 ಕೆ.ಜಿ ತೂಗುತ್ತದೆ. ಅಂಗಡಿಯವರು ರಸಗೊಬ್ಬರ ಮೂಟೆಯನ್ನು ರೀ ಪ್ಯಾಕ್ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ರೈತ ಜಗದೀಶ್ ತಿಳಿಸಿದ್ದಾರೆ.
ಇಲ್ಲಿ ಮಾರಾಟ ಮಾಡುವ ಗೊಬ್ಬರದ ಮಾದರಿಯನ್ನು ಮಂಡ್ಯದ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅಲ್ಲಿಂದ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಮಾರಾಟ ಮಾಡದಂತೆ ಅಂಗಡಿ ಮಾಲೀಕನಿಗೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ ಎಂದು ಕೃಷಿ ಅಧಿಕಾರಿ ದೀಪಕ್ ತಿಳಿಸಿದ್ದಾರೆ.