ಮೈಸೂರು/ವಿಜಯಪುರ: ವಿಶ್ವವಿಖ್ಯಾತ ನಾಡಹಬ್ಬ ದಸರಾ ಪ್ರಯುಕ್ತ ಸಾಂಪ್ರದಾಯಿಕ ನಾಡಕುಸ್ತಿಗೆ ಕ್ರೀಡಾ ಸಚಿವ ನಾರಾಯಣ ಗೌಡ ಚಾಲನೆ ನೀಡಿದರು.
ನಾಡಹಬ್ಬದಲ್ಲಿ, ನಾಡಕುಸ್ತಿಗೆ ತನ್ನದೇ ಆದ ಮಹತ್ವವಿದ್ದು ಇಂದಿಗೂ ಸಹಾ ಸಾಂಸ್ಕೃತಿಕ ನಗರಿಯಲ್ಲಿ ಕುಸ್ತಿ ಮನೆಗಳಿದ್ದು ಈ ಹಿನ್ನೆಲೆಯಲ್ಲಿ ದಸರಾ ಸಾಂಪ್ರದಾಯಿಕ ಕುಸ್ತಿಗೆ ಮಹತ್ವವಿದೆ. ದಸರಾ ಅಂಗವಾಗಿ ದೊಡ್ಡಕೆರೆ ಮೈದಾನದಲ್ಲಿರುವ ಕುಸ್ತಿ ಅಂಗಳದಲ್ಲಿ 7 ದಿನಗಳ ಕಾಲ ನಾಡಕುಸ್ತಿ ನಡೆಯಲಿದ್ದು, ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ದಸರಾ ಕುಸ್ತಿಯಲ್ಲಿ ಸುಮಾರು 400ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ಇದರಲ್ಲಿ ದಸರಾ ಕಿಶೋರ್, ದಸರಾ ಕೇಸರಿ, ದಸರಾ ಕಂಠೀರವ, ದಸರಾ ಕುಮಾರ್ ಹೆಸರಿನಲ್ಲಿ ಮಣ್ಣಿನ ಮೈದಾನದಲ್ಲಿ ಕುಸ್ತಿಪಟುಗಳು ಸೆಣಸಾಡಲಿದ್ದಾರೆ.
ಉದ್ಘಾಟನೆ ಬಳಿಕ ಮಾತನಾಡಿದ ಸಚಿವರು, ಮೈಸೂರು ವಿಭಾಗ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಹಲವು ಗರಡಿ ಮನೆಗಳಲ್ಲಿ ಕುಸ್ತಿಪಟುಗಳನ್ನು ತಯಾರು ಮಾಡಿ, ಪಂದ್ಯಾವಳಿಗಳಿಗೆ ಕಳುಹಿಸುತ್ತಿದ್ದಾರೆ. ನಮ್ಮ ಸರ್ಕಾರ ಕೂಡ ಕುಸ್ತಿಪಟುಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಗರಡಿ ಮನೆಗಳ ನಿರ್ಮಾಣಕ್ಕೆ ನಮ್ಮ ಕ್ರೀಡಾ ಇಲಾಖೆಯಿಂದ 10 ಲಕ್ಷ ರೂಪಾಯಿ ಅನುದಾನ ನೀಡುತ್ತಿದ್ದೇವೆ ಎಂದರು.