ಮೈಸೂರು: ಕೆಲವು ಮಹಾನ್ ವ್ಯಕ್ತಿಗಳನ್ನ ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ. ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಸಾಧನೆಗಳು ಎಂದಿಗೂ ಅಮರವಾಗಿರುತ್ತವೆ. ಇವರ ಸಾಲಿನಲ್ಲಿ ನಾಡಪ್ರಭು ಕೆಂಪೇಗೌಡರು ಸೇರುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
500 ವರ್ಷಗಳ ಹಿಂದೆಯೇ ಒಂದು ಸುಸಜ್ಜಿತವಾದ ನಗರವನ್ನು ಕಟ್ಟಿದರೆಂದರೆ ಅವರ ದೂರದೃಷ್ಟಿ ಹೇಗಿತ್ತೆಂಬುದನ್ನು ನಾವು ಊಹಿಸಲೂ ಸಾಧ್ಯವಿಲ್ಲ. ವಿಜಯನಗರದ ಪಾಳೆಗಾರನೊಬ್ಬ ಬೆಂಗಳೂರಿನಂತಹ ಜಾಗವನ್ನು ಆಯ್ಕೆ ಮಾಡಿ ನಗರವನ್ನು ನಿರ್ಮಿಸಿರುವುದರಲ್ಲಿ ಅವರ ಬುದ್ಧಿಮತ್ತೆ ಎದ್ದು ತೋರುತ್ತದೆ. ಬಹುತೇಕ ಬೆಂಗಳೂರಿನ ದೇವಾಲಯಗಳು ಆಗಿನ ಕಾಲದಲ್ಲಿ ನಿರ್ಮಾಣವಾಗಿದ್ದವು. ರಾಜ್ಯದ ಶೇ. 52 ರಷ್ಟು ಆದಾಯ ಬೆಂಗಳೂರಿನಿಂದ ಬರುತ್ತಿದೆ ಎಂದರು.
ರಾಜ್ಯದ ಅಭಿವೃದ್ಧಿಗೆ ಬೆಂಗಳೂರಿನ ಆದಾಯ ಮೂಲ ಕಾರಣವಾಗಿದೆ. ಕರ್ನಾಟಕ ರಾಜ್ಯಕ್ಕೆ ಬೆಂಗಳೂರು ಕಾಮಧೇನುವಿನಂತಿದೆ. ಇಂತಹ ಮಹಾನ್ ವ್ಯಕ್ತಿಗಳ ಕೊಡುಗೆಗಳ ಬಗ್ಗೆ ಧನ್ಯತಾಭಾವ ಮನಸ್ಸಿನಲ್ಲಿರಬೇಕು. ಸರ್ಕಾರ ಕೆಂಪೇಗೌಡರ ಜಯಂತಿಯನ್ನು ಆಚರಿಸುತ್ತಿರುವುದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2, ಏರ್ಪೋರ್ಟ್ ಮುಂಭಾಗದ 108 ಅಡಿಗಳ ಅದ್ಭುತವಾದ ಕೆಂಪೇಗೌಡರ ಪ್ರತಿಮೆ ಇವೆಲ್ಲವೂ ಎಲ್ಲಾ ಸರ್ಕಾರಗಳು ಕೆಂಪೇಗೌಡರ ಮೇಲೆ ಇಟ್ಟಿರುವ ಗೌರವದ ಸೂಚ್ಯಂಕವಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಹರೀಶ್ ಗೌಡ, ನಮ್ಮಲ್ಲಿ ಒಗ್ಗಟ್ಟು ಸಂಘಟನೆಯ ಕೊರತೆ ಇದೆ. ಸಮುದಾಯದ ತಳಮಟ್ಟದಲ್ಲಿರುವ ವ್ಯಕ್ತಿಯ ನೆರವಿಗೆ ಸಮುದಾಯದವರು ಒಗ್ಗಟ್ಟಾಗಿರಬೇಕು. ರಾಜ್ಯಮಟ್ಟದಲ್ಲಿ ನೀಡುವ ಕೆಂಪೇಗೌಡ ರತ್ನ ಪ್ರಶಸ್ತಿಯಂತೆ ಜಿಲ್ಲಾ ಮಟ್ಟದಲ್ಲೂ ಪ್ರತಿ ವರ್ಷ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು ಎಂದು ಅಭಿಪ್ರಾಯಪಟ್ಟರು.