ಮೈಸೂರು: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರದಲ್ಲಿ ಮೈಸೂರಿನ ಐದು ಕಲ್ಲುಗಳು ಶಿಲೆಯಾಗಿ ಮೈದಳೆಯಲಿವೆ. ಜ.22ರಂದು ಮಂದಿರದ ಗರ್ಭಗುಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರಥ್ಯದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಐತಿಹಾಸಿಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ದೇಶ ಹಾಗೂ ವಿದೇಶದಲ್ಲಿರುವ ರಾಮನ ಕೋಟ್ಯಂತರ ಭಕ್ತರು ಕಾದು ಕುಳಿತಿದ್ದಾರೆ. ಮತ್ತೊಂದೆಡೆ, ದೇವಾಲಯದ ಆವರಣದಲ್ಲಿ ಶಿಲೆಯಾಗಿ ಪ್ರತಿಷ್ಟಾಪನೆಯಾಗಲಿರುವ ರಾಮ, ಸೀತೆ, ಲಕ್ಷ್ಮಣ, ಭರತ, ಶತ್ರುಜ್ಞ ವಿಗ್ರಹಗಳ ನಿರ್ಮಾಣಕ್ಕೆ ಮೈಸೂರಿನಿಂದ ಕಲ್ಲುಗಳನ್ನು ಸಾಗಿಸಲಾಗಿದೆ.
ಜಯಪುರ ಹೋಬಳಿಯ ಗುಜ್ಜೇಗೌಡನಪುರ ನಿವಾಸಿ ರಾಮದಾಸ್ ಅವರ ಜಮೀನನ್ನು ಗುತ್ತಿಗೆ ಪಡೆದು ಕ್ವಾರಿ ನಡೆಸುತ್ತಿರುವ ಶ್ರೀನಿವಾಸ್ ನಟರಾಜು ಎಂಬವರು ಅಯೋಧ್ಯೆ ರಾಮಮಂದಿರಕ್ಕೆ ಐದು ವಿಗ್ರಹಕ್ಕೆ ಬೇಕಾಗಿರುವ ಕಲ್ಲುಗಳನ್ನು ಕಳುಹಿಸಿಕೊಡಲಾಗಿದೆ. ಸುಮಾರು ಆರು ತಿಂಗಳ ಹಿಂದೆ ಬೆಂಗಳೂರಿನ ಸುರೇಂದ್ರ ವಿಶ್ವಕರ್ಮ ಎಂಬವರು ಗುಜ್ಜೇಗೌಡನಪುರದಲ್ಲಿರುವ ಜಮೀನಿಗೆ ಬಂದು, ವಿಗ್ರಹಗಳಿಗೆ ಪೂರಕವಾದ ಕಲ್ಲುಗಳನ್ನು ಪರಿಶೀಲಿಸಿ, ಅದರ ಮಾಹಿತಿಯನ್ನು ಅಯೋಧ್ಯೆ ರಾಮಮಂದಿರ ಟ್ರಸ್ಟ್ನಲ್ಲಿ ಒಬ್ಬರಾಗಿರುವ ಗೋಪಾಲ್‌ಗೆ ಕಳುಹಿಸಿದ್ಧಾರೆ. ದೇಶದ ವಿವಿಧ ಭಾಗಗಳ 17 ಮಂದಿ ಇಂಜಿನಿಯರ್‌ಗಳು ಕಲ್ಲಿನ ಗುಣಮಟ್ಟ ಪರಿಶೀಲಿಸಿ, ಗುಜ್ಜೇಗೌಡನಪುರದ ಜಮೀನಿನ ಕಲ್ಲುಗಳಿಗೆ ಒಪ್ಪಿಗೆ ನೀಡಿದ್ದಾರೆ.