ಮೈಸೂರು: ದೀಪಾವಳಿ ಹಬ್ಬ ಹಾಗೂ ಕಾರ್ತಿಕ ಮಾಸದಲ್ಲಿ ಮದುವೆ ಕಾರ್ಯಕ್ರಮಗಳು ಜೊತೆಗೆ ರಿಯಾಯಿತಿ ಹಿನ್ನೆಲೆಯಲ್ಲಿ ಅಪ್ಪಟ ಮೈಸೂರು ರೇಷ್ಮೆ ಸೀರೆ ದಾಖಲೆಯ ಮಾರಾಟವಾಗಿದೆ. ಒಂದೇ ದಿನ ದಾಖಲೆಯ 2.52 ಕೋಟಿ ರೂ ಮೌಲ್ಯದ ರೇಷ್ಮೆ ಸೀರೆಗಳು ಮಾರಾಟವಾಗಿದೆ. ಸರಾಸರಿ 4 ಪಟ್ಟು ಹೆಚ್ಚು ಮಾರಾಟ ಆಗುವ ಮೂಲಕ ಮೈಸೂರು ರೇಷ್ಮೆ ಸೀರೆಗೆ ಇರುವ ಬೇಡಿಕೆಯನ್ನು ಮತ್ತೆ ಸಾಬೀತು ಮಾಡಿದೆ.
ಜಂಬೂ ಸವಾರಿ ವೇಳೆ ಚಾಮುಂಡೇಶ್ವರಿ ದೇವಿ ಇಂದಿಗೂ ಮೈಸೂರು ರೇಷ್ಮೆ ಸೀರೆ ತನ್ನ ಬೇಡಿಕೆ ಉಳಿಸಿಕೊಂಡಿದೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ. ಪರಿಶುದ್ಧ ರೇಷ್ಮೆ ಹಾಗೂ ಚಿನ್ನದ ಜರಿಗಳಿಂದ ತಯಾರಾಗುವ ಮೈಸೂರು ರೇಷ್ಮೆ ಸೀರೆಗೆ ಎಲ್ಲಿಲ್ಲದ ಬೇಡಿಕೆ.
ರಾಜ್ಯ ರೇಷ್ಮೆ ಕೈಗಾರಿಕಾ ನಿಗಮದ ಕಾರ್ಖಾನೆ ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿದೆ. ಕಾರ್ಖಾನೆಯ ಮುಂಭಾಗದಲ್ಲಿ ರೇಷ್ಮೆ ಸೀರೆ ಮಾರಾಟ ಮಾಡುವ ಕೆಎಸ್ಐಸಿ ಮಳಿಗೆಗಳೂ ಇವೆ. ಇದರ ಜೊತೆಗೆ ಮೈಸೂರು ನಗರದಲ್ಲಿ ಕೆಸ್ಐಸಿಯ ಐದು ಮಳಿಗೆಗಳು, ಹೈದರಾಬಾದ್, ಬೆಂಗಳೂರು, ಚನ್ನಪಟ್ಟಣ, ದಾವಣಗೆರೆ ಸೇರಿದಂತೆ ಒಟ್ಟು 14 ಕೆಎಸ್ಐಸಿ ಮಳಿಗೆಗಳಿವೆ.
ಹಬ್ಬ ಹಾಗೂ ರಿಯಾಯಿತಿಯಿಂದ ಹೆಚ್ಚಿದ ಮಾರಾಟ:ದೀಪಾವಳಿ ಹಾಗೂ ರೇಷ್ಮೆ ಸೀರೆಗಳಿಗೆ ಹಬ್ಬದ ರಿಯಾಯಿತಿ ಇರುವುದರಿಂದ ಮೈಸೂರು ನಗರದ ಐದು ಕೆಎಸ್ಐಸಿ ಮಳಿಗೆಗಳು ಸೇರಿದಂತೆ ಇತರ ಕಡೆ ಇರುವ 14 ಮೈಸೂರು ರೇಷ್ಮೆ ಮಾರಾಟ ಮಳಿಗೆಗಳಲ್ಲಿ ಶನಿವಾರ ಒಂದೇ ದಿನ 2.52 ಕೋಟಿ ವಿವಿಧ ಬೆಲೆಯ 178 ಸೀರೆಗಳು ಮಾರಾಟವಾಗಿವೆ. ಸರಾಸರಿ 4 ಪಟ್ಟು ಮಾರಾಟ ಹೆಚ್ಚಳವಾಗಿದ್ದು, ಅದರಲ್ಲಿ ಮೈಸೂರಿನ 5 ಮಳಿಗೆಗಳಿಂದ 72 ಲಕ್ಷ ಹಾಗೂ ಇತರ ಕಡೆ ಇರುವ ಮಳಿಗೆಗಳಿಂದ 1.80 ಕೋಟಿ ವ್ಯಾಪಾರವಾಗಿದೆ ಎಂದು ಮೈಸೂರಿನ ಕೆಎಸ್ಐಸಿ ಮಳಿಗೆಯ ಸಹಾಯಕ ವ್ಯವಸ್ಥಾಪಕ ಜಗದೀಶ್ ಮಾಹಿತಿ ನೀಡಿದ್ದಾರೆ.
ಅದರಲ್ಲಿ 25 ಸಾವಿರ ಬೆಲೆ ಒಳಗಿರುವ ರೇಷ್ಮೆ ಸೀರೆಗಳಿಗೆ ಶೇಕಡಾ 10 ರಷ್ಟು, ಅದಕ್ಕಿಂತ ಹೆಚ್ಚಿನ ಬೆಲೆಯ ರೇಷ್ಮೆ ಸೀರೆಗಳಿಗೆ ಶೇಕಡಾ 20 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಈ ರಿಯಾಯಿತಿ ದರ ನವೆಂಬರ್ 18 ರವರೆಗೆ ಇರಲಿದೆ. ಆ ಹಿನ್ನೆಲೆಯಲ್ಲಿ ಮೈಸೂರು ರೇಷ್ಮೆ ಸೀರೆ ಕೊಳ್ಳಲು ಮಹಿಳೆಯರು ಮುಗಿ ಬೀಳುತ್ತಿದ್ದಾರೆ. ಇದರ ಜೊತೆಗೆ ಕಾರ್ತಿಕ ಮಾಸದಲ್ಲಿ ಮದುವೆ ಸಮಾರಂಭಗಳು ಇರುವುದರಿಂದ ರೇಷ್ಮೆ ಸೀರೆ ಕೊಳ್ಳಲು ಮಹಿಳೆಯರು ಹೆಚ್ಚಾಗಿ ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ಕೆಎಸ್ಐಸಿ ರೇಷ್ಮೆ ಸೀರೆ ಮಳಿಗೆಗೆ ಆಗಮಿಸುತ್ತಿದ್ದಾರೆ.
ಮೈಸೂರು ರೇಷ್ಮೆ ಸೀರೆ ಈಗಲೂ ಬೇಡಿಕೆ ಉಳಿಸಿಕೊಂಡಿರುವುದೇಕೆ?: ಮೈಸೂರು ರೇಷ್ಮೆ ಸೀರೆಯನ್ನು ಅಪ್ಪಟ ರೇಷ್ಮೆ ಹಾಗೂ ಚಿನ್ನದ ಜರಿಗಳಿಂದ ಈಗಲೂ ಕೈ ಮಗ್ಗದಲ್ಲಿ ನೇಯಲಾಗುತ್ತದೆ. ಈ ಸೀರೆ ಕಡಿಮೆ ತೂಕವಿದ್ದು, ಧರಿಸುವಾಗ ಹಗುರ ಅನುಭವವನ್ನು ಹಾಗೂ ಸರಾಗವಾಗಿ ಗಾಳಿಯಾಡುವ ರೀತಿಯಲ್ಲಿ ನೇಯ್ಗೆ ಮಾಡಲಾಗುತ್ತದೆ. ಬೆಲೆಗೆ ತಕ್ಕಂತೆ ಚಿನ್ನದ ಜರಿಗಳನ್ನು ಹಾಕಲಾಗುತ್ತದೆ. 15 ಸಾವಿರದಿಂದ ಆರಂಭವಾಗುವ ಮೈಸೂರು ರೇಷ್ಮೆ ಸೀರೆ, 2 ಲಕ್ಷದವರೆಗೂ ತಲುಪುತ್ತದೆ. ಪ್ರತಿಯೊಂದು ಸೀರೆಯನ್ನು ಚಿಕ್ಕ ಜರಿಯಿಂದ ದೊಡ್ಡ ಜರಿಯವರೆಗೆ, ಚಿಕ್ಕ ಬಾರ್ಡರ್ನಿಂದ ಅಗಲ ಬಾರ್ಡರ್ನಲ್ಲಿ ಮಾಡಲಾಗುತ್ತದೆ. ಜೊತೆಗೆ ಡಬಲ್ ಬಾರ್ಡರ್ಗಳಿರುವ ಸೀರೆಗಳೂ ಇವೆ.
ಇದೇ ಮೈಸೂರು ಸಿಲ್ಕ್ ಸೀರೆಯ ವಿಶೇಷ: ಪ್ರತಿಯೊಂದು ಮೈಸೂರು ರೇಷ್ಮೆ ಸೀರೆಯ ಬಾರ್ಡರ್ ಬಳಿ ಕೆಎಸ್ಐಸಿ ಕೋಡ್ ನಂಬರ್ ಹಾಕಲಾಗುತ್ತದೆ. ಇದರಿಂದ ಸುಲಭವಾಗಿ ಮೈಸೂರು ಸಿಲ್ಕ್ ಸೀರೆಯನ್ನು ಗುರುತಿಸಲು ಅನುಕೂಲವಾಗುತ್ತದೆ. ಜೊತೆಗೆ ಮೈಸೂರು ರೇಷ್ಮೆ ಸೀರೆ 20 ವರ್ಷವಾದರೂ ಅದರ ಬೆಲೆ ಕಡಿಮೆಯಾಗುವುದಿಲ್ಲ. 20 ವರ್ಷಗಳಾದ ನಂತರವೂ ಆ ಸೀರೆಯನ್ನು ವಾಪಸ್ ನೀಡಿದರೆ ಸೀರೆಯಲ್ಲಿರುವ ಚಿನ್ನದ ಜರಿ ಅಂಶವನ್ನು ಅದೇ ಬೆಲೆಗೆ ಖರೀದಿ ಮಾಡುತ್ತಾರೆ. ಹಾಗಾಗಿ ಮಹಿಳೆಯರು ಮೈಸೂರು ರೇಷ್ಮೆ ಸೀರೆಯನ್ನು ಕೊಂಡು ಧರಿಸಿ, ಜೋಪಾನ ಮಾಡಿ ಇಡುವುದು ಇಂದಿಗೂ ನಡೆದುಕೊಂಡು ಬರುತ್ತಿದೆ. ಜೊತೆಗೆ ಮೈಸೂರು ರೇಷ್ಮೆ ಸೀರೆ ಕೊಂಡರೆ ಯಾವಾಗಲೂ ಬೆಲೆ ಕಡಿಮೆ ಆಗುವುದಿಲ್ಲ ಎಂಬ ನಂಬಿಕೆ ಇದೆ. ಆದ್ದರಿಂದ ಮೈಸೂರು ರೇಷ್ಮೆ ಸೀರೆ ಮಹಿಳೆಯರು ಹೆಚ್ಚು ಇಷ್ಟ ಪಡುತ್ತಾರೆ.
ಜಂಬೂ ಸವಾರಿ ಮೆರವಣಿಗೆಯಲ್ಲಿ ಮೈಸೂರು ರೇಷ್ಮೆ ಸೀರೆ:ಈ ಬಾರಿ ಮೈಸೂರು ದಸರಾದ ವಿಜಯ ದಶಮಿಯ ದಿನ ಚಿನ್ನದ ಅಂಬಾರಿಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಅಲಂಕಾರ ಮಾಡಲಾಗಿದ್ದ ಸೀರೆಯೂ ಸಹ ಮೈಸೂರು ರೇಷ್ಮೆ ಸೀರೆಯಾಗಿತ್ತು. ಇದರ ಬೆಲೆ 95 ಸಾವಿರ ರೂ ಆಗಿತ್ತು ಎಂದು ಹೆಸರು ಹೇಳಲು ಬಯಸದ ಕೆಎಸ್ಐಸಿಯ ಅಧಿಕಾರಿಯೊಬ್ಬರು ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:20 ಗ್ರಾಂ ಚಿನ್ನ, 20 ಗ್ರಾಂ ಬೆಳ್ಳಿಯಿಂದ ಸಿದ್ಧವಾಯ್ತು ರೇಷ್ಮೆ ಸೀರೆ: ಬೆಲೆ ಎಷ್ಟು ಗೊತ್ತಾ?