ಮೈಸೂರು :ಕೊರೊನಾ ಅಟ್ಟಹಾಸಕ್ಕೆ ಥಿಯೇಟರ್ಗಳು ಒಂದೊಂದಾಗಿ ಕಣ್ಮರೆಯಾಗುತ್ತಿರುವ ಮಧ್ಯದಲ್ಲಿ ಮೈಸೂರಿನ ಪ್ರತಿಷ್ಠಿತ 'ಲಕ್ಷ್ಮಿ' ಚಿತ್ರಮಂದಿರ ಸಿನಿ ಪ್ರೇಕ್ಷಕರಿಗೆ ಇನ್ನು ಮುಂದೆ ನೆನಪು ಮಾತ್ರ. ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿರುವ ಲಕ್ಷ್ಮಿ ಥಿಯೇಟರ್ 1947ರಿಂದ ಆರಂಭವಾಗಿ 72 ವರ್ಷಗಳ ಸುದೀರ್ಘ ಇತಿಹಾಸ ಇದೆ.
ಮೈಸೂರಿನಲ್ಲಿ ಪ್ರದರ್ಶನ ನಿಲ್ಲಿಸಿದ 'ಲಕ್ಷ್ಮಿ' ಚಿತ್ರಮಂದಿರ.. ಕನ್ನಡ ಚಲನಚಿತ್ರದ ಹಿರಿಯ ನಟರಾಗಿದ್ದ ಡಾ.ರಾಜಕುಮಾರ್, ಡಾ .ವಿಷ್ಣುವರ್ಧನ್, ಅಂಬರೀಶ್, ಜಯಲಲಿತ, ಎನ್ಟಿಆರ್ ಸೇರಿದಂತೆ ಅನೇಕ ಇತ್ತೀಚಿನ ನಟ-ನಟಿಯರು ಕೂಡ ಈ ಸಿನಿಮಾ ಥಿಯೇಟರಿಗೆ ಬಂದು ಹೋಗುತ್ತಿದ್ದರು. ಆದರೆ, ಕೊರೊನಾ ಲಾಕ್ಡೌನ್ ಪರಿಣಾಮ ಈ ಚಿತ್ರಮಂದಿರವನ್ನು ನಡೆಸಲಾಗದೆ ಮುಚ್ಚಲು ನಿರ್ಧರಿಸಲಾಗಿದೆ.
ಮುಂಬೈ ಮೂಲದ ಉದ್ಯಮಿಗಳು ಆರಂಭಿಸಿದ ಲಕ್ಷ್ಮಿ ಥಿಯೇಟರ್ನ 1970ರ ಏಪ್ರಿಲ್ 24ರಂದು ಮೈಸೂರಿನ ಶ್ರೀಕಂಠನ್ ಹಾಗೂ ಅವರ ಸ್ನೇಹಿತ ಕೆ. ರಾಮರಾವ್ ಖರೀದಿ ಮಾಡಿದ್ದರು. ಪ್ರಸ್ತುತ ಶ್ರೀಕಂಠನ್ ಅವರ ಪುತ್ರ ಜಯಂತ್ ಸುಬ್ರಮಣ್ಯಂ ಹಾಗೂ ರಾಮರಾಮ್ ಅವರ ಪುತ್ರ ಪ್ರಕಾಶ್ ಬೆಂಗಳೂರಿನ ಶಾರದ ಮೂವೀಸ್ ಗ್ರೂಪ್ನ ಮನ್ ಮುಲ್ ಅವರು ಜಂಟಿಯಾಗಿ ಈ ಥಿಯೇಟರ್ ನಡೆಸಿಕೊಂಡು ಬರುತ್ತಿದ್ದರು.
ಆದರೆ, ಕೊರೊನಾ ಮೊದಲ ಹಾಗೂ ಎರಡನೇ ಅಲೆಯಿಂದ ಸಾಕಷ್ಟು ಹೊಡೆತ ಬಿದ್ದಿರುವುದರಿಂದ ಥಿಯೇಟರ್ ನಡೆಸಲು ಕಷ್ಟವಾಗುತ್ತಿದೆ. ಹಾಗಾಗಿ, ಲಕ್ಷ್ಮಿ ಥಿಯೇಟರ್ ಕ್ಲೋಸ್ ಮಾಡಿ, ಈ ಸ್ಥಳದಲ್ಲಿ ಶಾಪಿಂಗ್ ಮಾಲ್ ಅಥವಾ ಮಾರ್ಕೆಟ್ ತೆರೆಯಲು ಚಿಂತನೆ ಮಾಡಿದ್ದಾರೆ ಎನ್ನಲಾಗ್ತಿದೆ.
ಮೈಸೂರಿನಲ್ಲಿ ಶಾಂತಲ ಹಾಗೂ ನಾಗರಾಜ್ ಈ ಎರಡು ಚಿತ್ರಮಂದಿರ ಮುಚ್ಚಿದ ಬೆನ್ನಲ್ಲೇ ಇದೀಗ ಲಕ್ಷ್ಮಿ ಚಿತ್ರ ಮಂದಿರ ಕೂಡ ಮುಚ್ಚುತ್ತಿರುವುದು ಸಿನಿ ಪ್ರೇಕ್ಷಕರಲ್ಲಿ ಬೇಸರ ಮೂಡಿಸಿದೆ.