ಮೈಸೂರು: ಮೈಸೂರು ದಸರಾದ ಕೇಂದ್ರ ಬಿಂದುವಾಗಿದ್ದ, ಕಾಡಾನೆಗಳನ್ನು ಸೆರೆ ಹಿಡಿಯುವುದರಲ್ಲಿ ಸೈ ಎನಿಸಿಕೊಂಡಿದ್ದ, ವಿವಿಧ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ ಅರ್ಜುನ ಆನೆ ಸೋಮವಾರ ಮೃತಪಟ್ಟಿದೆ. ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ಅರ್ಜುನ ಉಸಿರು ನಿಲ್ಲಿಸಿದೆ. ಅರ್ಜುನನ ಸ್ವಭಾವ, ಸಾಹಸ, ಧೈರ್ಯ, ಕಾರ್ಯಾಚರಣೆಯ ಶೈಲಿ, ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗುವ ರಾಜಗಾಂಭೀರ್ಯ, ಗಜಪಡೆಯ ಹಿರಿಯ ಅಣ್ಣನಂತಿದ್ದ ಅರ್ಜುನನ ಕುರಿತ ಮಾಹಿತಿ ಇಲ್ಲಿದೆ.
ಅರ್ಜುನನ ದುರಂತ ಸಾವು: ದಸರಾ ಗಜಪಡೆಯ ಹಿರಿಯಣ್ಣನಂತಿದ್ದ ಅರ್ಜುನ ಆನೆ ಇನ್ನಿಲ್ಲ. ಹಾಸನ ಜಿಲ್ಲೆಯ ಸಕಲೇಶಪುರದ ಯಸಳೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಒಂಟಿ ಸಲಗದ ಜತೆ ಕಾಳಗಕ್ಕಿಳಿದು ದಾರುಣ ಸಾವು ಕಂಡಿದೆ. ಇತರ ಮೂರು ಸಾಕಾನೆಗಳೊಂದಿಗೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅರ್ಜುನನ ಮೇಲೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿತ್ತು. ಇತರ ಮೂರು ಸಾಕಾನೆಗಳು ಮತ್ತು ಮಾವುತರು ಅಲ್ಲಿಂದ ಓಡಿ ದಾಳಿಯಿಂದ ತಪ್ಪಿಸಿಕೊಂಡರು. ಆದರೆ 64 ವರ್ಷದ ಅರ್ಜುನ ದಿಟ್ಟತನದಿಂದ ಅದನ್ನು ಎದುರಿಸುವ ಸಾಹಸಕ್ಕಿಳಿಯಿತು. ಈ ಕಾದಾಟದಲ್ಲಿ ಹೊಟ್ಟೆ ಭಾಗಕ್ಕೆ ಕಾಡಾನೆ ತಿವಿದ ಪರಿಣಾಮ ಗಂಭೀರ ಗಾಯಗೊಂಡ ಅರ್ಜುನ ಕೊನೆ ಉಸಿರೆಳೆದಿದೆ.
ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ :2012ರಿಂದ 2019ರ ವರೆಗೆ ಒಟ್ಟು ಎಂಟು ಬಾರಿ ಅಂಬಾರಿ ಹೊತ್ತು ಅರ್ಜುನ ಸೈ ಎನಿಸಿಕೊಂಡಿದ್ದ. ಬಳಿಕ 2019ರಲ್ಲಿ 60 ವರ್ಷ ದಾಟಿದ ಹಿನ್ನೆಲೆ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಭಿಮನ್ಯುಗೆ ವಹಿಸಲಾಗಿತ್ತು. ಬಳಿಕ ಅರ್ಜುನ, ನಿಶಾನೆ ಆನೆಯಾಗಿ ಗಜಪಡೆಯನ್ನು ಮುನ್ನಡೆಸುತ್ತಿತ್ತು.
ಅರ್ಜುನನನ್ನು ಪುಂಡಾನೆಗಳನ್ನು ಹಿಡಿಯಲು, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ನಿರಂತರವಾಗಿ ಬಳಸಿಕೊಳ್ಳಲಾಗುತ್ತಿತ್ತು. ಅಂಬಾರಿ ಆನೆ ಬಲರಾಮನ ನಿವೃತ್ತಿಯ ನಂತರ ಅಂಬಾರಿಯನ್ನು ಹೊರುವ ಜವಾಬ್ದಾರಿ ಅರ್ಜುನನ ಪಾಲಿಗೆ ಒದಗಿಬಂದಿತ್ತು. ಇದಕ್ಕೂ ಮುನ್ನ ಒಂದು ಬಾರಿ ಅಂಬಾರಿ ಹೊತ್ತು ಸಾಗಿತ್ತು. ಬಳಿಕ ದೊಡ್ಡಕೆರೆ ಮೈದಾನದಲ್ಲಿ ತನ್ನ ಮಾವುತನನ್ನೇ ತುಳಿದು ಸಾಯಿಸಿದ ಪ್ರಕರಣದ ಸಂಬಂಧ ಹಲವು ವರ್ಷಗಳ ಕಾಲ ಅರ್ಜುನನನ್ನು ಗಜಪಡೆಯಿಂದ ದೂರವಿಡಲಾಗಿತ್ತು. ಆದರೆ ಮಾವುತ ದೊಡ್ಡ ಮಾಸ್ತಿ ಅವರ ಗರಡಿಯಲ್ಲಿ ಪಳಗಿದ ಅರ್ಜುನ 2012ರಿಂದ ಗಜಪಡೆಯ ಭಾಗವಾಗಿದ್ದ.
ತೂಕದಲ್ಲೂ ಅಗ್ರಗಣ್ಯ: ಅಂದಾಜು 6 ಸಾವಿರ ಕಿಲೋ ತೂಗುತ್ತಿದ್ದ ಅರ್ಜುನ, ಗಜಪಡೆಯ ಎಲ್ಲಾ ಆನೆಗಳಿಗಿಂತ ಹೆಚ್ಚು ತೂಕದ ಆನೆಯಾಗಿ ಗುರುತಿಸಿಕೊಂಡಿತ್ತು. 2010ರಲ್ಲಿ 4541 ಕೆಜಿ ತೂಕವಿದ್ದ ಅರ್ಜುನ, 2011ರಲ್ಲಿ 5055 ಕೆಜಿಗೆ ತೂಕ ಏರಿಸಿಕೊಂಡಿದ್ದ. ಅಲ್ಲಿಂದ 2019ರ ವರೆಗೆ ಸುಸೂತ್ರವಾಗಿ ಅಂಬಾರಿ ಹೊತ್ತು ಗಮನ ಸೆಳೆದಿದ್ದ. 2023ರ ದಸರಾ ವೇಳೆಗೆ ಅರ್ಜುನ 5680 ಕಿಲೋ ಹೊಂದಿದ್ದ. ಮಾವುತ ದೊಡ್ಡ ಮಾಸ್ತಿ ಅವರ ನಿಧನದ ಬಳಿಕ ವಿನು ಅವರು ಮಾವುತರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದರು. ಕಾಡಾನೆ ಜತೆಗಿನ ಕಾದಾಟದಲ್ಲಿ ತನ್ನ ನೆಚ್ಚಿನ ಆನೆಯನ್ನು ಉಳಿಸಿಕೊಳ್ಳಲಾಗದ ದು:ಖದಿಂದ ವಿನು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.