ಮೈಸೂರು :ಕಾಲೇಜಿನ ವಿದ್ಯಾರ್ಥಿಗಳಿಂದ ಸುಮಾರು 25 ಲಕ್ಷ ರೂ. ಶುಲ್ಕ ವಸೂಲಿ ಮಾಡಿ ಅದನ್ನು ಆಡಳಿತ ಮಂಡಳಿಗೆ ನೀಡದೇ ಅಸಿಸ್ಟೆಂಟ್ ಪ್ರೊಫೆಸರ್ಯೊಬ್ಬರು ಪರಾರಿಯಾಗಿರುವ ಆರೋಪದಡಿ ಪ್ರಕರಣ ದಾಖಲಾಗಿದೆ. ಬನ್ನೂರು ರಸ್ತೆಯಲ್ಲಿ ಇರುವ ಪ್ರತಿಷ್ಠಿತ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಹರ್ಷಿತಾ ಪರಾರಿಯಾದವರು.
ಪರೀಕ್ಷೆಯ ಹೊಸ್ತಿಲಲ್ಲಿ ಹರ್ಷಿತಾ ಅವರು ಆಡಳಿತ ಮಂಡಳಿಗೆ ಶುಲ್ಕದ ಹಣ ನೀಡದ ಪರಿಣಾಮ ಆಡಳಿತ ಮಂಡಳಿಯವರು ಶುಲ್ಕ ಪಾವತಿಸುವವರೆಗೂ, ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ವಿಚಲಿತರಾಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಅಸಿಸ್ಟೆಂಟ್ ಪ್ರೊಫೆಸರ್ ವಿರುದ್ಧ ಹಾಗೂ ಕಾಲೇಜಿನ ಆಡಳಿತ ಮಂಡಳಿ ಸಹ ಆಕೆಯ ವಿರುದ್ಧ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇನ್ನು ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ಅಸಿಸ್ಟೆಂಟ್ ಪ್ರೊಫೆಸರ್ಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಪ್ರಕರಣ ಹಿನ್ನೆಲೆ : 2022-23ನೇ ಸಾಲಿನ ಕಾಲೇಜು ಶುಲ್ಕವನ್ನು ವಿದ್ಯಾರ್ಥಿಗಳು ಕಳೆದ ಸೆಪ್ಟೆಂಬರ್ನಲ್ಲಿಯೇ ಪಾವತಿಸಬೇಕಾಗಿತ್ತು. ಈ ಸಂದರ್ಭದಲ್ಲಿ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಆದ ಹರ್ಷಿತಾ ಎಂಬುವವರು ಶುಲ್ಕವನ್ನು ನನ್ನಲ್ಲಿಯೇ ಪಾವತಿಸಿ ಎಂದು ವಿದ್ಯಾರ್ಥಿಗಳನ್ನು ಕೇಳುತ್ತಿದ್ದರು. ಜೊತೆಗೆ ಕಾಲೇಜಿನ ಆ ವಿಭಾಗದ ಇತರ ಪ್ರೊಫೆಸರ್ಗಳು ಸಹ ಶುಲ್ಕವನ್ನು ಅವರಿಗೆ ಪಾವತಿಸಿ ಎಂದು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು. ಜೊತೆಗೆ ವಿದ್ಯಾರ್ಥಿಗಳ ಮೊಬೈಲ್ಗೆ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.