ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಜಮೀನು ನೀಡಲು ಈಗಾಗಲೇ ಮುಡಾ ನಿರ್ಣಯ ಕೈಗೊಂಡಿದೆ.
ಹಂಚ್ಯಾ- ಸಾತಗಳ್ಳಿ ಬಿ ವಲಯದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿ ಬಳಿ 19.5 ಎಕರೆ ಜಮೀನು ನೀಡಲು ಮುಡಾ ನಿರ್ಧಾರ ಕೈಗೊಂಡಿದ್ದು, ಕ್ರಿಕೆಟ್ ಸಂಸ್ಥೆಗೆ ಭೋಗ್ಯಕ್ಕೆ ನೀಡಬೇಕೇ ಅಥವಾ ಮಾರಾಟ ಮಾಡಬೇಕೇ ಎಂಬುದರ ಬಗ್ಗೆ ಚರ್ಚಿಸಲಾಗುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮುಡಾ ಅಧ್ಯಕ್ಷ ಹಾಗೂ ಕೆಎಸ್ಸಿಎ ಅಧ್ಯಕ್ಷ ರೋಜರ್ ಬಿನ್ನಿ ಚರ್ಚೆ:
ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ, ನಗರದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾದರೆ ನಗರ ಅಭಿವೃದ್ಧಿಯಾಗಲಿದೆ. ಜಮೀನು ನೀಡಲು ಈ ಹಿಂದೆಯೇ ನಿರ್ಣಯವಾಗಿದ್ದು, ಮುಂದಿನ ದಿನಗಳಲ್ಲಿ ಜಾಗ ಹಸ್ತಾಂತರ ಮಾಡಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು. ಈ ವಿಚಾರಕ್ಕೆ ಸರ್ಕಾರದಿಂದ ಆದೇಶ ಬರಬೇಕಾಗಿರುವುದರಿಂದ ಅದಕ್ಕಾಗಿ ಪೂರಕ ಅಂಶಗಳನ್ನೊಳಗೊಂಡ ಪ್ರಸ್ತಾವನೆ ಸಲ್ಲಿಸುತ್ತೇವೆ.
ಬೆಂಗಳೂರಿನಲ್ಲಿ ಸೆಪ್ಟಂಬರ್ 9 ರಂದು ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಕೆಎಸ್ಸಿಎ ಪದಾಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ಆ ನಂತರ ಇಲಾಖೆಗಳ ನಡುವೆ ಚರ್ಚೆ ಏರ್ಪಡಿಸಲಾಗುವುದು. ಅಗತ್ಯ ಬಿದ್ದರೆ ಕ್ಯಾಬಿನೆಟ್ನಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದರು.
ಕೆಎಸ್ಸಿಎ ಖಜಾಂಚಿ ವಿನಯ್ ಮೃತ್ಯುಂಜಯ ಮಾತನಾಡಿ, ಕ್ರಿಕೆಟ್ ಸಂಸ್ಥೆ ಸ್ವಂತ ಕ್ರೀಡಾಂಗಣ ಹೊಂದಲು 50 ಕೋಟಿ ರೂ. ಬಜೆಟ್ ಇಟ್ಟುಕೊಂಡಿದ್ದು, ಜಮೀನು ಖರೀದಿ ಮತ್ತು ಭೋಗ್ಯ ಪಡೆಯಲು ಸಿದ್ಧವಾಗಿದೆ. ಕ್ರೀಡಾಂಗಣದ ಜೊತೆಗೆ ಸುಸಜ್ಜಿತ ಪೆವಿಲಿಯನ್ ನಿರ್ಮಿಸಲಾಗುವುದು. ರಣಜಿ, ಐಪಿಎಲ್ ಹಾಗೂ ಇತರ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಮೈಸೂರಿನಲ್ಲೂ ರಣಜಿ ಸೇರಿದಂತೆ ವಿವಿಧ ಪಂದ್ಯಗಳನ್ನು ಆಯೋಜಿಸಲಾಗುವುದು ಎಂದರು.
ಮೈಸೂರು ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರದವಾಗಿದ್ದು, ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಅವಶ್ಯಕತೆ ಇದೆ. ಕ್ರೀಡಾಂಗಣ ನಿರ್ಮಾಣಗೊಂಡರೆ ಐಪಿಎಲ್ ಸೇರಿದಂತೆ ಪ್ರಮುಖ ಪಂದ್ಯಗಳನ್ನು ಮುಂದಿನ ದಿನಗಳಲ್ಲಿ ನಡೆಸಬಹುದು. ಮುಡಾ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೆಎಸ್ಸಿಎ ಅಧ್ಯಕ್ಷ ರೋಜರ್ ಬಿನ್ನಿ ಅಭಿಪ್ರಾಯಪಟ್ಟರು.
ಇನ್ನು ಈಗಿರುವ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದ ಗುತ್ತಿಗೆಯನ್ನು ಮತ್ತೆ ವಿಸ್ತರಿಸಲಾಗಿದ್ದು, ಈ ಸಂಬಂಧ ಕೆಎಸ್ಸಿಎ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಒಪ್ಪಂದ ಮಾಡಿಕೊಂಡಿದೆ ಎಂದು ಇದೇ ಸಂದರ್ಭದಲ್ಲಿ ಮೃತ್ಯುಂಜಯ ತಿಳಿಸಿದರು.