ಮೈಸೂರು: ಹೈಕಮಾಂಡ್ ಜೊತೆ ಚರ್ಚಿಸಿ ಯಾವ ಕ್ಷಣದಲ್ಲಿ ಬೇಕಾದರೂ ಮಂತ್ರಿ ಮಂಡಲ ವಿಸ್ತರಣೆಯಾಗಬಹುದು ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಈ ಟಿವಿ ಭಾರತದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇಂದು ಮೈಸೂರಿಗೆ ಆಗಮಿಸಿ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹಾಗೂ ಎಂಎಲ್ಸಿ ವಿಶ್ವನಾಥ್ ಜೊತೆ ಗೌಪ್ಯ ಮಾತುಕತೆ ನಡೆಸಿದ ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದರು. ಮೈಸೂರು ಭಾಗದಲ್ಲಿ ಬಿಜೆಪಿ ಸ್ಥಳೀಯ ನಾಯಕರಿಗೆ ಮಂತ್ರಿ ಸ್ಥಾನ ನೀಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಎಸ್.ಟಿ.ಸೋಮಶೇಖರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ವಿಧಾನ ಪರಿಷತ್ ಸದಸ್ಯರಾಗಿ ಹೆಚ್.ವಿಶ್ವನಾಥ್ ಇದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಸುಭದ್ರ ಸರ್ಕಾರ ಇದೆ. ಅದಾಗ್ಯೂ ಇಂದು ವಿಜಯೇಂದ್ರ ಅವರನ್ನು ಮಂತ್ರಿ ಮಂಡಲ ವಿಸ್ತರಣೆ ಏನಾದರೂ ಇದೆಯಾ ಅಂತ ಕೇಳಿದೆ. ಅವರು ನೋಡಬೇಕು ಸರ್ ಅಂದಿದ್ದಾರೆ ಎಂದು ಪ್ರತಿಕ್ರಿಯಿಸಿದರು.
2 ನೇ ಹಂತದಲ್ಲಿ ಬೋರ್ಡ್ ಮತ್ತು ಕಾರ್ಪೊರೇಷನ್ ಅಧ್ಯಕ್ಷರ ಸ್ಥಾನವನ್ನು ಕೊಡಲಾಗುತ್ತಿದೆ. ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಜೆಡಿಎಸ್, ಕಾಂಗ್ರೆಸ್ ಬಿಟ್ಟವರ ಪೈಕಿ ಹಾಗೂ ಬಿಜೆಪಿಯ ಹಿರಿಯ ಸದಸ್ಯರಿಗೆ ಮಂತ್ರಿ ಮಂಡಲದಲ್ಲಿ ಅವಕಾಶ ಕೊಡುವ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.